ಬಂಟ್ವಾಳ: ರಾಜ್ಯ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಸಮಾಜದಲ್ಲಿ ತೀರಾ ಹಿಂದುಳಿದ ಸಮಾಜ ಮತ್ತು ಬಡವರಿಗೆ ನೆರವಿಗೆ ಸ್ಪಂದಿಸುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿದೆ. ಇದಕ್ಕಾಗಿ ಅರ್ಹ ಫಲಾನುಭವಿಗಳಿಗೆ 94ಸಿ ಮತ್ತಿತರ ಹಕ್ಕು ಪತ್ರ ಸಹಿತ ವಿವಿಧ ಸೌಲಭ್ಯಗಳ ಮಂಜೂರಾತಿ ಪತ್ರ ನೀಡುವಲ್ಲಿ ಅಧಿಕಾರಿ ವರ್ಗವೂ ಹೆಚ್ಚು ಕಾಳಜಿ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಮತ್ತಿತರ ವಿವಿಧ ಸೌಲಭ್ಯಗಳ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನತೆಗೆ 94ಸಿ ಯೋಜನೆಯಡಿ ಸರ್ಕಾರಿ ಜಾಗದಲ್ಲಿ ವಾಸಿಸಲು ಹಕ್ಕುಪತ್ರ ನೀಡುವ ಮಾದರಿಯಲ್ಲಿ ಪುರಸಭೆ ಮತ್ತಿತರ ನಗರ ವಾಸಿಗಳಿಗೆ ಅನುಕೂಲವಾಗುವಂತೆ ಸರ್ಕಾರವು 94ಸಿಸಿ ಯೋಜನೆ ಜಾರಿಗೊಳಿಸಿದೆ ಎಂದರು.
ಇದೇ ವೇಳೆ ಕಳ್ಳಿಗೆ, ಸಜಿಪಮುನ್ನೂರು, ಸಜಿಪಮೂಡ, ನರಿಕೊಂಬು, ಅಮ್ಟಾಡಿ ಐದು ಗ್ರಾಮಗಳ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಸಹಿತ ಅಡಿಕೆ ಕೊಳೆರೋಗ ಪರಿಹಾರಧನ ಚೆಕ್, ಪಿಂಚಣಿ, ಸಾಲ ಮನ್ನಾ ಮತ್ತಿತರ ವಿವಿಧ ಸೌಲಭ್ಯಗಳ ಮಂಜೂರಾತಿ ಪತ್ರ ವಿತರಿಸಿದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಬ್ಬಾಸ್ ಆಲಿ, ತಾಲ್ಲೂಕು ಪಂಚಾಯಿತಿ ಸದಸ್ಯ ಎಪ್ರಿಯಂ ಸಿಕ್ವೇರ, ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ ಮತ್ತಿತರರು ಇದ್ದರು.
