ಸಾಂಕ್ರಾಮಿಕ ರೋಗ ಪತ್ತೆಗೆ ರಕ್ತ ಪರೀಕ್ಷೆ ಸೌಲಭ್ಯಕ್ಕೆ ಆಗ್ರಹ
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರವಲ್ಲದೆ ತಾಲ್ಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡೆಂಗೆ ಮತ್ತಿತರ ಮಾರಕ ಸಾಂಕ್ರಾಮಿಕ ರೋಗಗಳ ಬಗ್ಗೆ ರಕ್ತ ತಪಾಸಣೆಗೆ ಸೂಕ್ತ ಉಪಕರಣ ಮತ್ತು ಪ್ರಯೋಗಾಲಯ ತಂತ್ರಜ್ಞರನ್ನು ತ್ವರಿತವಾಗಿ ಒದಗಿಸಲು ಆರೋಗ್ಯ ಸಚಿವ ಯು.ಟಿ.ಖಾದರ್ ಸಹಿತ ಆರೋಗ್ಯ ಇಲಾಖೆಗೆ ಮನವಿ ಮಾಡುವಂತೆ ಗ್ರಾ.ಪಂ.ಸದಸ್ಯರು ಆಗ್ರಹಿಸಿ ನಿರ್ಣಯ ಕೈಗೊಂಡಿದ್ದಾರೆ.
ಗ್ರಾ.ಪಂ.ಅಧ್ಯಕ್ಷ ದಯಾನಂದ ಸಪಲ್ಯ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ರಾಘವ ಅಮೀನ್ ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಇತರ ಸದಸ್ಯರು ಧ್ವನಿಗೂಡಿಸಿದರು. ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೆಂಗೆ ಪ್ರಕರಣ ವ್ಯಾಪಕವಾಗಿದ್ದು, ಇವರ ರಕ್ತ ಪರೀಕ್ಷೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅಲೆದಾಡುವಂತಾಗಿದೆ ಎಂದು ಅವರು ದೂರಿದರು.
ಇಂದಿರಾ ಆವಾಜ್ ಯೋಜನೆಯಡಿ ಹೆಚ್ಚುವರಿ ಮನೆ ಮಂಜೂರುಗೊಳಿಸದೆ ಪ್ರಸಕ್ತ ಮಂಜೂರಾದ ಬೆರಳೆಣಿಕೆ ಮನೆಗಳನ್ನು ತಿರಸ್ಕರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಇಲ್ಲಿನ ಗ್ರಾ.ಪಂ.ವ್ಯಾಪ್ತಿಯಲ್ಲಿ ರಸ್ತೆ ಬದಿ ಚರಂಡಿ ದುರಸ್ತಿಗೊಳಿಸಲಾಗಿದ್ದು, ನಾಗರಿಕರು ಚರಂಡಿಗೆ ಕಸ ಕಡ್ಡಿಗಳನ್ನು ಹಾಕದಂತೆ ಎಲ್ಲಾ ಮನೆ ಮತ್ತು ಕಟ್ಟಡ ಮಾಲೀಕರಿಗೆ ನೋಟೀಸು ನೀಡಲು ಸಭೆ ನಿರ್ಣಯಿಸಿತು. ಸದಸ್ಯರಾದ ಹರೀಶ ಆಚಾರ್ಯ, ಪುಷ್ಪಲತಾ, ಕುಸುಮ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

By Suddi9

Leave a Reply

Your email address will not be published. Required fields are marked *