ಮೂಡುಬಿದರೆ: ಕಳೆದ 15 ತಿಂಗಳಲ್ಲಿ ಸುಮಾರು 5.70 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಕುಡಿಯುವ ನೀರು, ಸ್ವಚ್ಛತೆ ಹಾಗೂ ಅರ್ಹರಿಗೆ ಸವಲತ್ತು ನೀಡುವಲ್ಲಿ ಹೆಚ್ಚಿನ ಮತುವರ್ಜಿ ವಹಿಸಿದ್ದೇವೆ ಎಂದು ಪುರಸಭಾಧ್ಯಕ್ಷೆ ಸುಪ್ರಿಯಾ .ಡಿ ಶೆಟ್ಟಿ ಹೇಳಿದರು.
ಅಧ್ಯಕ್ಷರಾಗಿ ಸುಪ್ರಿಯಾ.ಡಿ ಶೆಟ್ಟಿ ಅವರ 15 ತಿಂಗಳ ಅಧಿಕಾರವಧಿ ಇದೇ 13ರಂದು ಮುಕ್ತಾಯಗೊಳ್ಳಲಿರುವ ಹಿನ್ನೆಲೆಯಲ್ಲಿ ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಅಭಿವೃದ್ಧಿ ಕಾರ್ಯಗ ಳ ವಿವರ ನೀಡಿದರು.

ವೆಂಟೆಡ್ ಡ್ಯಾಂ:
ನಗರಕ್ಕೆ ನೀರು ಪೂರೈಕೆಯು ಪುಚ್ಚೆಮೊಗರು ಅಣೆಕಟ್ಟನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಆನೆಗುಂಡಿಯಿಂದ ಜಾಕ್ವೆಲ್ಗೆ ನೀರು ಸರಬರಾಜಿಗೆ ಪ್ರತ್ಯೇಕ ಅನುದಾನಕ್ಕೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳಿಸಲಾಗಿದೆ. ಮುಂದೆ ವೆಂಟೆಡ್ ಡ್ಯಾಮ್ ನಿರ್ಮಾಣದ ಯೋಜನೆಯಿದೆ ಎಂದರು.
ಘನತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಗೊಳಿಸಲಾಗಿದ್ದು ಮನೆ ಮನೆ ಕಸ ಸಂಗ್ರಹ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು ಕಸ ಸಂಗ್ರಹದ ವಾಹನಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದರು.
ಪಕ್ಕಾ ಮನೆ ನಿರ್ಮಾಣಕ್ಕೆ 18 ಲಕ್ಷ, ಶೌಚಾಲಯ ರಚನೆಗೆ 6.55 ಲಕ್ಷ ವಿನಿಯೋಗಿಸಲಾಗಿದೆ ಎಂದರು. 85 ಕೋಟಿ ವೆಚ್ಚದ ಒಳಚರಂಡಿ ಯೋಜನೆಗೆ ಶೀಘ್ರದಲ್ಲೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. 26 ಕೋಟಿ ವೆಚ್ಚದ ಖಾಸಗಿ ಸಹಭಾಗಿತ್ವದ ನೂತನ ಮಾರುಕಟ್ಟೆಗೆ ಸರಕಾರದಿಂದ ಅನುಮೋದನೆ ದೊರಕಿದ್ದು ಡಿಸೆಂಬರ್ನಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
837 ಬಿಪಿಎಲ್ ಕುಟುಂಬಗಳಿಗೆ ಅಡುಗೆ ಅನಿಲ ಖರೀದಿಸಲು ಪುರಸಭೆ ರೂ18,76,00 ಭರಿಸಿದೆ. 25 ಫಲಾನುಭವಿಗಳಿಗೆ ರೂ1,25,000 ವೆಚ್ಚದಲ್ಲಿ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದರು. ಸುಪ್ರಿಯಾ ಶೆಟ್ಟಿ ಅವರ ಅವಧಿಯಲ್ಲಿ ಕುಡಿಯುವ ನೀರು,ಸ್ವಚ್ಛತೆ ಮತ್ತು ದಾರಿದೀಪಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವ ಅಭಯಚಂದ್ರ ಹೇಳಿದರು. ಪುರಸಭೆ ಉಪಾಧ್ಯಕ್ಷೆ ಎಲಿಜಾ ಮಿನೇಜಸ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಬಶೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೇಘನಾದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇದ್ದರು.
