ಬಂಟ್ವಾಳ:ತಾಲ್ಲೂಕಿನ ಸಜಿಪನಡು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಗಾಂಜಾ ಪತ್ತೆಯಾಗಿ ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.
ಆರೋಪಿಗಳನ್ನು ಕಾರು ಚಾಲಕ ನಾಟೆಕಲ್ ನಿವಾಸಿ ಸಿದ್ದಿಕ್, ಮಂಜನಾಡಿ ನಿವಾಸಿಗಳಾದ ಇಸಾಕ್, ಆಶ್ರಫ್, ಅಬ್ದುಲ್ ಖಾದರ್ ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳವಾರ ಸಂಜೆ ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್ ನೇತೃತ್ವದ ಪೊಲೀಸರು ಮಂಗಳವಾರ ಮಧ್ಯಾಹ್ನ ಸಜಿಪನಡು ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಮಾರುತಿ ರಿಟ್ಜ್ ಕಾರಿನಲ್ಲಿ ಸುಮಾರು ರೂ 750 ಮೌಲ್ಯದ ಒಟ್ಟು 14 ಗ್ರಾಂ ಗಾಂಜಾ ಹುಡಿ ಪತ್ತೆಯಾಗಿದೆ.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಮತ್ತೆ ವಾಹನ ತಪಾಸಣೆ ಮುಂದುವರಿಸಲಾಗುತ್ತಿದ್ದು, ಗಾಂಜಾ ಸಾಗಾಟ ಅಥವಾ ಮಾರಾಟ ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
