ಕೋಲಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ದರ್ಗಾಮೊಹಲ್ಲಾದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದ ಡೆಂಗ್ಯೂ ವಿರೋಧಿ ದಿನಾಚರಣೆಯ ಜಾಥಾಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಲತಾಕುಮಾರಿ ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಡೆಂಗ್ಯೂ ಕಾಯಿಲೆ ಸೊಳ್ಳೆಗಳ ಮುಖಾಂತರ ಉತ್ಪತ್ತಿಯಾಗಿ ಹರಡುತ್ತದೆ. ಡೆಂಗ್ಯೂ ಮಾರಣಾಂತಿಕ ಕಾಯಿಲೆಯಾಗಿದ್ದು, ಇದರ ನಿಯಂತ್ರಣಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕಾಯಿಲೆ ಬರುವುದಕ್ಕೆ ಮುಂಚೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಕಾಯಿಲೆಯನ್ನು ತಡೆಯಲು ಹೆಚ್ಚಿನ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ಜಾಥಾವನ್ನು ಆಯೋಜಿಸಲಾಗಿದೆ. ಸೊಳ್ಳೆಗಳು ಹರಡದಂತೆ ಮತ್ತು ಸಂತಾನಾಭಿವೃದ್ಧಿ ಆಗದಂತೆ ತೆಗೆದುಕೊಳ್ಳುವ ಕ್ರಮಗಳನ್ನು ತಿಳಿಸುವ ಸಲುವಾಗಿ ಹಳ್ಳಿ ಹಳ್ಳಿಗಳಿಗೆ ಹೋಗಿ ಹೆಚ್ಚಿನ ಅರಿವು ಮೂಡಿಸಬೇಕು. ನಿಫಾ ವೈರಸ್ ಕೂಡ ಸ್ವಚ್ಛತೆಗೆ ಸಂಬಂಧಪಟ್ಟ ವಿಷಯವಾಗಿದ್ದು, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಇದೇ ವೇಳೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ವೈದ್ಯಾಧಿಕಾರಿಗಳಾದ ಡಾ.ನಾರಾಯಣಸ್ವಾಮಿ, ಡಾ. ಜಗದೀಶ್, ಡಾ.ವಿನಯ್ ಗಡ್, ಡಾ. ವೇಣುಗೋಪಾಲ್, ಆರೋಗ್ಯ ಶಿಕ್ಷಣಾಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.

