25nbk1 special news

ಕೋಲಾರ: ಜಿಲ್ಲೆಯಾದ್ಯಂತ ಭಯೋತ್ಪಾದನೆ ಮಾಡುತ್ತಿರುವ ಮಕ್ಕಳ ಅಪಹರಣಕಾರರ ವದಂತಿಯು ವೈಯುಕ್ತಿಕ ಹಿತದ್ವೇಷಗಳ ಸಾಧನೆಗೆ ಆಸ್ಪದವಾಗುತ್ತಿರುವ ಪ್ರಕರಣವೊಂದು ಇಲ್ಲಿದೆ.

ಜಿಲ್ಲೆಯಲ್ಲಿ ಮಕ್ಕಳ ಅಪಹರಣಕಾರರು ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸಿದ್ದಾರೆ, ಮಕ್ಕಳನ್ನು ಅಪಹರಿಸಿ 2 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ, ಮಕ್ಕಳನ್ನು ಕೊಂದು ಅವರ ಬೆನ್ನು ಮೂಳೆಯನ್ನು ತೆಗೆದು ಚೈನಾಸಾಲ್ಟ್ ತಯಾರಿಸಲಾಗುತ್ತಿದೆ ಎಂಬುದು ವಾಟ್ಸ್ ಆಪ್, ಫೇಸ್‍ಬುಕ್ ಮೊದಲಾದ ಸಾಮಾಜಿಕ ಜಾಲಗಳ ಇತ್ತೀಚಿನ ಸುದ್ದಿಯಾಗಿದೆ.

ಇದು ನಿಜ ಸುದ್ದಿಯೋ, ಸುಳ್ಳು ಸುದ್ದಿಯೋ ಎಂಬುದನ್ನೂ ಪರಿಶೀಲಿಸದೇ ಸಾರ್ವಜನಿಕರು ತಮಗೆ ಗುಮಾನಿ ಬಂದವರೆಲ್ಲರನ್ನೂ ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತಿರುವುದು ಪ್ರಸಕ್ತ ಗಂಭೀರ ಆದರೆ ಅಮಾನುಷ ಕೃತ್ಯವಾಗಿದೆ. ಈ ಹಲ್ಲೆಗಳಲ್ಲಿ ಸಾಕಷ್ಟು ಜನ ಅಸು ನೀಗಿರುವುದು ನಿಜಕ್ಕೂ ಭಯೋತ್ಪಾದನೆಯೇ ಆಗಿದೆ.

ಇಂಥ ಪರಿಸ್ಥಿತಿಯ ದುರ್ಲಾಭ ಪಡೆದ ನಗರದ ಯುವಕನೊಬ್ಬ ತನಗಿದ್ದ ದ್ವೇಷ ಸಾಧನೆಗೆ ತನ್ನ ನೆರೆಯ ಬಾಲಕನೊಬ್ಬನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿ ಈತನೂ ಮಕ್ಕಳ ಅಪಹರಣಕಾರನೆಂದು ಎಲ್ಲರಿಗೂ ಪೋಸ್ಟ್ ಮಾಡಿ ಅಪಪ್ರಚಾರ ಮಾಡಿ ಪೊಲೀಸರ ಆತಿಥ್ಯ ಪಡೆಯುತ್ತಿರುವ ಸುದ್ದಿಯೊಂದು ಇಲ್ಲಿದೆ.

ನಗರದ ನ್ಯೂ ಸಿಟಿ ಹೋಟೆಲ್ ಪಕ್ಕದ ದರ್ಗಾ ಆವರಣದಲ್ಲಿ ವಾಸವಾಗಿರುವ ಅರ್ಬಾಸ್ ಖಾನ್ ಪೊಲೀಸರ ಆತಿಥ್ಯದಲ್ಲಿರುವ ಯುವಕ. ಈತನಿಗೆ ನೆರೆಯ ಮನೆಯವರಿಗೂ ವೈಷಮ್ಯವಿತ್ತು. ಮಕ್ಕಳ ಅಪಹರಣಕಾರರನ್ನು ಸಾರ್ವಜನಿಕರು ಥಳಿಸುತ್ತಿರುವುದನ್ನು ಗಮನಿಸಿದ ಈತ ತನ್ನ ನೆರೆ ಮನೆಯ ಬಾಲಕನ ಫೋಟೋವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿ ಮಕ್ಕಳ ಅಪಹರಣಕಾರನೆಂದು ಮುಖ ಶೀರ್ಷಿಕೆಯನ್ನು ನೀಡಿದ್ದನು. ಇದರಿಂದ ಸಾರ್ವಜನಿಕರು ಪ್ರಚೋದನೆಗೊಳಗಾಗಿ ಬಾಲಕನ ಮೇಲೆ ಹಲ್ಲೆ ನಡೆಸಬಹುದೆಂದು ನಿರೀಕ್ಷಿಸಿದ್ದನು.

ಈ ಪ್ರಕಟಣೆಯನ್ನು ಗಮನಿಸಿದ ಮುಳಬಾಗಲಿನ ಸಾಕಿಬ್ ಬಾಲಕನ ಮನೆಯವರಿಗೆ ಈ ಅಪಪ್ರಚಾರದ ಬಗ್ಗೆ ಮಾಹಿತಿ ನೀಡಿದ. ಇದರಿಂದ ಆತಂಕಗೊಳಗಾದ ಬಾಲಕನ ಮನೆಯವರು ತಮ್ಮ ಮಗನನ್ನು ಮನೆಯಿಂದ ಹೊರಗೆ ಕಳುಹಿಸಿದರೆ ಎಲ್ಲಿ ಸಾರ್ವಜನಿಕರು ಹಲ್ಲೆ ಮಾಡುವರೆಂಬ ಪ್ರಾಣಭಯದಿಂದ ಕಳೆದ ಎರಡು ದಿನಗಳಿಂದ ಮನೆಯಿಂದ ಹೊರಗಡೆ ಬರುವುದನ್ನೇ ನಿಲ್ಲಿಸಿದ್ದರು.

ಈ ಅಪಪ್ರಚಾರವು ಎಲ್ಲೆಡೆ ಪ್ರಚಾರವಾಗಿ ತಮ್ಮ ಮಗನ ಮುಂದಿನ ಭವಿಷ್ಯತ್ತಿಗೆ ಎಲ್ಲಿ ಮಾರಕವಾಗುವುದೆಂಬ ಭಯದಿಂದ ಶುಕ್ರವಾರ ನಗರ ಪೊಲೀಸರಿಗೆ ಅರ್ಬಾಸ್ ಖಾನ್ ವಿರುದ್ಧ ದೂರು ನೀಡಿದರು. ನಗರ ಪೊಲೀಸರು ಅರ್ಬಾಸ್ ಖಾನ್ ಬಂಧಿಸಿ ವಿಚಾರಣೆ ನಡೆಸಿದ್ದಾರೆ.

 

By suddi9

Leave a Reply

Your email address will not be published. Required fields are marked *