42

ಶಿಬರೂರು: ದೈವ-ದೇವ ಮಂದಿರಗಳ ಪವಿತ್ರ ನೆಲೆವೀಡಾದ ದಕ್ಷಿಣ ಕನ್ನಡದಲ್ಲಿ ಪ್ರತೀ ಮಾಗಣೆಗಳಲ್ಲಿ ಪ್ರತಿಯೊಂದು ಗ್ರಾಮಗಳಲ್ಲೂ ದುಷ್ಟರ ಶಿಕ್ಷೆಗೆ ಶಿಷ್ಟರ ರಕ್ಷಣೆಗಾಗಿ ದೈವ ಮಂದಿರಗಳಿವೆ. ಪ್ರಕೃತಿ ಸೌಂದರ್ಯದಿಂದ ಕಣ್ಮನ ಸೆಳೆಯುವ ಶಿಬರೂರಿನ ಶ್ರೀ ಕೊಡಮಣಿತ್ತಾಯ ದೈವಸ್ಥಾನವು ಐತಿಹಾಸಿಕ ಹಿನ್ನೆಲೆಯುಳ್ಳ ಪ್ರಾಚೀನ ದೈವಸ್ಥಾನಗಳಲ್ಲಿ ಒಂದಾಗಿದ್ದು, ಸಾವಿರಾರು ಭಕ್ತಾದಿಗಳಿಗೆ ಮನಃ ಶಾಂತಿ ನೆಮ್ಮದಿಯನ್ನು ನೀಡುವ ಕಾರಣಿಕ ಕ್ಷೇತ್ರವಾಗಿ ಕಂಗೊಳಿಸುತ್ತಿದೆ. ಮಣಿದವರಿಗೆ ಕೊಡುಗೈಯ ಶಿಬರೂರು ಕೊಡಮಣಿತ್ತಾಯ ಎಂಬ ಮಾತು ಪ್ರತೀತಿಯಲ್ಲಿದ್ದು, ವಿಷವೈದ್ಯನೆಂಬ ಅಭಿದಾನವನ್ನು ಪಡೆದಿದೆ.

16

ಒಂದು ಐತಿಹ್ಯದಂತೆ ದುರ್ಗಾ ಮತ್ತು ಈಶ್ವರ ದೇವರು ಗುಡ್ದಗಾಡಿನಲ್ಲಿ ತಿರುಗಾಡುತ್ತಿರುವಾಗ ದುರ್ಗೆಯಿಂದ ಅಗೋಚರವಾದ ಶಕ್ತಿಯೊಂದು ಉತ್ಪನ್ನವಾಯಿತು. ನಾಡಜನರು ತಿರುಗಾಡುತ್ತಿದ್ದ ಆ ಶಕ್ತಿಯನ್ನು ಮಂತ್ರವಾದಿಯ ನೆರವಿನಿಂದ ಕುಂಭದಲ್ಲಿ ಸ್ತಂಭನಗೊಳಿಸಿ ಮಹಾವೀರ ಗಂಗೆ ಎಂಬ ನದಿಯಲ್ಲಿ ತೇಲಿ ಬಿಟ್ಟ ಕುಂಭವು ಪೆರಿಂಜೆ ಎಂಬಲ್ಲಿ ಆಳುತ್ತಿದ್ದ ಜೈನ ಮನೆತನದವರಿಗೆ ದೊರೆಯಿತು. ಆ ಕುಂಭವನ್ನು ಇರುಳಿನಲ್ಲಿ ತೆರೆದಾಗ ಅದರಲ್ಲಿ ದೈವ ಪ್ರತ್ಯಕ್ಷವಾದುದರಿಂದ ಆ ದೈವವು ಕುಂಭಕಂಠಿಣಿ ಎಂಬ ಹೆಸರನ್ನು ಪಡೆಯಿತು.

ಸುಮಾರು 700 ವರ್ಷಗಳ ಹಿಂದೆ ದೈವ ಭಕ್ತನಾದ ತಿಬಾರ ಗುತ್ತಿನ (ಶಿಬರೂರುಗುತ್ತು) ತಿಮ್ಮ ತಿಕರಿವಾಳ್ ಹಾಗೂ ಎಕ್ಕಾರಿನ ದುಗ್ಗಣ್ಣಕಾವರು ದೈವ ದರ್ಶನಕ್ಕಾಗಿ ಕ್ಷೇತ್ರಗಳನ್ನು ಸಂದರ್ಶಿಸುತ್ತಾ ಇರುವೈಲಿಗೆ ಬಂದರು. ಅಲ್ಲಿ ಹರಿಕೆ ಹಾಕಿ ಗಂಧ ಪ್ರಸಾದ ಸ್ವೀಕರಿಸಿ ಹಿಂದಿರುಗಿ ಬರುವಾಗ ಧರ್ಮಾತ್ಮನಾದ ತಿಮ್ಮತಿಕರಿವಾಳ್ ನನ್ನು ಅನುಸರಿಸಿ ದೈವಗಳು ತಿಬಾರಗುತ್ತು (ಶಿಬರೂರು) ಮನೆಗೆ ಬಂದವು. ಮಠದ ಗುಡ್ಡೆಯಲ್ಲಿ ಸ್ಥಾನ ಕಟ್ಟಿಸಿ ಧ್ವಜಾರೋಹಣ ಮಾಡಿಸಿ ಬಂಡಿ ಎಳೆಸಿ ಧರ್ಮದೈವಗಳಿಗೆ ಉತ್ಸವ ನಡೆಸಿದರು. ಪ್ರಕೃತಿ-ಪುರುಷ ಎರಡು ಸತ್ವ ಸಮ್ಮಳಿತವಾಗಿ ರಾಜನ್ ದೈವವಾಗಿಯೂ ಮಾಡ ವೈದಿಕ ವಿದ್ಯಾಸಂಪನ್ನರಾದ ವಿದ್ವಾಂಸರ ಕೇಂದ್ರವಾಗಿದ್ದು ಪ್ರಶಾಂತ ತಪೋವನವು ನದೀ ತೀರದ ಪಕ್ಕದಲ್ಲಿ ಕೊದಮಣಿತ್ತಾಯ ಶಿಬರೂರಿನಲ್ಲಿ ಮೆರೆದಾಡುತ್ತಿದೆ.

ಕ್ಷೇತ್ರದಲ್ಲಿರುವ ಕಾರಣೀಕ ತೀರ್ಥ ಬಾವಿ ಮಹಿಮೆಗೆ ಸಂಬಂಧಿಸಿದ ಹಿನ್ನೆಲೆಯೊಂದು ಇಂತಿದೆ. ಸೂರಿಂಜೆಯಲ್ಲಿದ್ದ ಏಕಮೂಲಿಕಾ ಪ್ರಯೋಗದಿಂದ ಗುಣಪಡಿಸಬಲ್ಲ ತ್ಯಾಂಪು ಶೆಟ್ಟಿಯ ಕೈಯಲ್ಲಿ ವಿಷವನ್ನು ಹೀರಬಲ್ಲ ವಿಷದ ಕಲ್ಲು ಇತ್ತು. ಅದನ್ನಾತ ಶ್ರೀ ದೈವದ ಪ್ರೇರಣೆಗೆ ಒಳಗಾಗಿ ಮುಂದೆ ಲೋಕೋಪಕಾರಕ್ಕಾಗಿ ಈ ಬಾವಿಗೆ ಹಾಕಿ ಪರಮಪಾವನವಾಗುವಂತೆ ಮಾಡಿದನು. ಕೊಡಮಣಿತ್ತಾಯ ವೈದ್ಯನಾಥನೆಂಬ ಅಭಿಮಾನಕ್ಕೂ ಪಾತ್ರನಾದನು.

ಈ ರೀತಿ ಐತಿಹಾಸಿಕ ಹಿನ್ನೆಲೆಯುಳ್ಳ ದೈವಸ್ಥಾನವನ್ನು 1978 ನೇ ಇಸವಿಯಲ್ಲಿ ಶಿಬರೂರುಗುತ್ತು ಮುದ್ದಣ್ಣ ಶೆಟ್ಟಿ ಹಿರಿತನದಲ್ಲಿ, ಅಂದಿನ ಅನುವಂಶಿಕ ಮೊಕ್ತೇಸರರಾದ ಶ್ರೀನಿವಾಸ ಶಿಬರಾಯ ಮತ್ತು ಶಿಬರೂರುಗುತ್ತು ಸಂಕು ಪಿ. ಶೆಟ್ಟಿಯವರ ನೇತ್ರತ್ವದಲ್ಲಿ ಪುನರ್ನವೀಕರಣಗೊಂಡು 1997 ರಲ್ಲಿ ಮಂಚಗಳ ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವವು ಜರಗಿದೆ. ಭದ್ರ ಬುನಾದಿಯ ಮೇಲೆ ಪುನರ್ನಿರ್ಮಾಣಗೊಂಡ ಈ ದೈವಸ್ಥಾನದ ನಾಲ್ಕು ಬದಿಗಳಲ್ಲಿ ಪ್ರಾಕಾರ, ಪ್ರವೇಶದಲ್ಲಿ ಭವ್ಯ ಮಹಾದ್ವಾರಗಳು ಇವೆ.

19

ಕಟೀಲು – ಶಿಬರೂರು ಸಂಬಂಧ: ಶಿಬರೂರು ದೈವಸ್ಥಾನಕ್ಕೆ ಶ್ರೀ ಕ್ಷೇತ್ರ ಕಟೀಲಿನೊಂದಿಗೆ ದೈವೀಕ ಸಂಪರ್ಕವಿದೆ. ಕಟೀಲಿನಲ್ಲಿ ಮೇಷ ಸಂಕ್ರಮಣದಂದು ಕೊಡಮಣಿತ್ತಾಯ ದೈವದ ಸಮಕ್ಷಮದಲ್ಲಿ ಧ್ವಜಾರೋಹಣವಾಗಿ ಜಾತ್ರೆಯ ಕೊನೆಗೆ ನಡೆಯುವ ಅವಬೃತೋತ್ಸವದಲ್ಲಿ ರಾತ್ರಿ ಶ್ರೀ ದೇವಿ ಹಾಗೂ ದೈವದ ಸಂದರ್ಶನೋದ್ದೇಶದ ಸಮಾಗಮ ನಿಜಕ್ಕೂ ಅವಿಸ್ಮರಣೀಯ. ಶಿಬರೂರಿನಿಂದ ಭವ್ಯ ಮೆರವಣಿಗೆಯಲ್ಲಿ ಸಾಗಿ ಬರುವ ಕೊಡಮಣಿತ್ತಾಯ ದೈವವು ರಾತ್ರಿ ಒಂದು ಗಂಟೆಯ ವೇಳೆಗೆ ತನ್ನ ಒಡತಿ ದುರ್ಗಾಂಬಿಕೆಯನ್ನು ಸಂದರ್ಶಿಸುತ್ತದೆ. ರಥಾರೋಹಣದವರೆಗೆ ದೇವಿಯನ್ನು ಬಜಯಂಗೈಸಿಕೊಂಡು ಅನಂತರದಲ್ಲಿ ನೇಮೋತ್ಸವವನ್ನು ಸ್ವೀಕರಿಸಿ ಸ್ವಸ್ಥಾನಕ್ಕೆ ಆಗಮಿಸುತ್ತದೆ.

ದೈವಸ್ಥಾನದ ಉತ್ಸವ/ಜಾತ್ರೆ ವಿವರ: ಈ ದೈವಸ್ಥಾನದಲ್ಲಿ ಪ್ರತೀ ವರ್ಷ ಧನು ಸಂಕ್ರಮಣಕ್ಕೆ ಧ್ವಜಾರೋಹಣಗೊಂಡು ಮರು ದಿನ ಮಹೋತ್ಸವ ಜರಗುತ್ತದೆ. ಶ್ರೀ ಉಳ್ಳಾಯ ದೈವದ ನೇಮದಲ್ಲಿ ತುಲಾಭಾರ ಸೇವೆ, ಕಂಚಿಲು ಸೇವೆ ಮತ್ತು, ಉರುಳು ಸೇವೆಗಳು, ಮಹಾಅನ್ನಸಂತರ್ಪಣೆ ನಡೆಯುತ್ತದೆ. ರಾತ್ರಿ ಕೊಡಮಣಿತ್ತಾಯ ದೈವದ ನೇಮ ಬಂಡಿ ಉತ್ಸವ, ಮರುದಿನದಿಂದ ಕ್ರಮವಾಗಿ ಕಾಂತೇರಿ ಧೂಮಾವತಿ, ಸರಳ ಧೂಮಾವತಿ, ಜಾರಂದಾಯ ದೈವ, ಕೈಯ್ಯೂರು ಧೂಮವತಿ ನೇಮೋತ್ಸವ ಪಿಲಿಚಾಮುಂಡಿ ದೈವದ ನೇಮೋತ್ಸವಗಳು ನಡೆದು ಧ್ವಜರೋಹಣ ಆಗುತ್ತದೆ. ಅದಲ್ಲದೆ ವಿನಾಯಕ ಚತುರ್ಥಿ, ಗೋಳಿ ಪಡ್ಪು ನೇಮ, ದೀಪಾವಳಿ, ಹೊಸಕಟ್ಟ ನೇಮ, ಮಕರ ಸಂಕ್ರಮಣ ನೇಮ ಮತ್ತು ಕೆಡ್ಡಸದ ನೇಮಗಳೆಂಬ ಪಂಚಪರ್ವ ಸೇವೆಗಳು ನಡೆಯುತ್ತವೆ. ಪ್ರತಿ ಮಂಗಳವಾರ, ಸಂಕ್ರಮಣ ಮತ್ತು ಆಷಾಡ ಮಾಸದ (ಸೋಣ ತಿಂಗಳು) ಪೂಜೆ ನಡೆಯುತ್ತವೆ.

ಮಂಗಳೂರಿನ ಸುಮಾರು 25 ಕಿ,ಮೀ ದೂರದಲ್ಲಿ ಶಿಬರೂರು ಕ್ಷೇತ್ರವಿದೆ. ಪ್ರಸಿದ್ಧ ಕಟೀಲು ಕ್ಷೇತ್ರದಿಂದ ಶಿಬರೂರಿಗೆ 2 ಕಿ.ಮೀ ದೂರವಿದೆ. ಸುರತ್ಕಲ್ಲಿನಿಂದ ಕಾಟಿಪಳ್ಳಕ್ಕಾಗಿ ಸೂರಿಂಜೆಯ ಮೂಲಕ ಶಿಬರೂರನ್ನು ತಲುಪಬಹುದು. ಪ್ರಕೃತ ಶಿವರೂರಿನಲ್ಲಿ ನಿರ್ಮಾಣಗೊಂಡಿರುವ ನೂತನ ಸೇತುವೆ ಮೂಲಕ ಕಿನ್ನಿಗೋಳಿಯಿಂದ ಕೇವಲ 3 ಕಿ.ಮೀ ದೂರವಿದೆ.

07

24

28

40

By suddi9

Leave a Reply

Your email address will not be published. Required fields are marked *