Matha-YEnike-13-5

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಒಟ್ಟು 58 ಅಭ್ಯರ್ಥಿಗಳ ಭವಿಷ್ಯವನ್ನು ಜಿಲ್ಲೆಯ ಮತದಾರ ಪ್ರಭುಗಳು ಶನಿವಾರ ಬರೆದಿದ್ದಾರೆ. ಇದರ ಅಂತಿಮ ತೀರ್ಪು ಮೇ 15ರಂದು ಹೊರಬೀಳಲಿದ್ದು, ಎಲ್ಲೆಡೆಯೂ ಕಾತರ-ಕುತೂಹಲ ಶುರುವಾಗಿದೆ. ಗೆಲುವು-ಸೋಲು ಯಾರ ಪಾಲಿಗೆ ಎಂಬ ಬಗ್ಗೆ ವ್ಯಾಪಕ ನಿರೀಕ್ಷೆ ಆರಂಭವಾಗಿದ್ದು, ಮತ ಎಣಿಕೆ ಕೇಂದ್ರವಾಗಿರುವ ಮಂಗಳೂರಿನ ಬೋಂದೇಲ್‌ ಮಹಾತ್ಮಾಗಾಂಧಿ ಶತಾಬ್ದ ಹಿರಿಯ ಪ್ರಾಥಮಿಕ ಹಾಗೂ ಸಂಯುಕ್ತ ಪದವಿಪೂರ್ವ ಕಾಲೇಜಿನತ್ತ ಸರ್ವರ ಚಿತ್ತ ನೆಟ್ಟಿದೆ.

ಈ ಮಧ್ಯೆ ಮತದಾರರ ತೀರ್ಪು ಬರೆದ ಎಲ್ಲ ಇವಿಎಂ ಮತಯಂತ್ರಗಳನ್ನು ಇದೇ ಕಾಲೇಜಿನ ಸ್ಟ್ರಾಂಗ್‌ ರೂಂನಲ್ಲಿ ಭಾರೀ ಭದ್ರತೆಯ ಜತೆಗೆ ಇಡಲಾಗಿದೆ. ಜತೆಗೆ, ಚುನಾವಣಾ ದಾಖಲೆಯನ್ನು ಇಲ್ಲಿ ಬಿಗಿ ಭದ್ರತೆಯಲ್ಲಿ ಇರಿಸಲಾಗಿದೆ. ಕಾಲೇಜಿನ ಸುತ್ತ ಕೇಂದ್ರ ಭದ್ರತಾ ಪಡೆಯಿಂದ ಭದ್ರತೆಯ ಉಸ್ತುವಾರಿ ನೋಡಿಕೊಳ್ಳಲಾಗುತ್ತಿದೆ.

23 ಭದ್ರತಾ ಕೊಠಡಿಗಳಲ್ಲಿ ಮತ ಯಂತ್ರ
23 ಭದ್ರತಾ ಕೊಠಡಿಗಳಲ್ಲಿ ಮತಯಂತ್ರವನ್ನು ಇಡಲಾಗಿದೆ. ಇದನ್ನು ಮೇ 15ರಂದು 14 ಕೊಠಡಿಗಳಲ್ಲಿ ಇಟ್ಟು ಎಣಿಕೆ ಮಾಡಲಾಗುತ್ತದೆ. ಮತ ಎಣಿಕೆ ನಡೆಸುವ ಹಿನ್ನೆಲೆಯಲ್ಲಿ ಒಟ್ಟು 112 ಮೇಜುಗಳನ್ನು ಜೋಡಿಸಿಡಲಾಗುತ್ತದೆ. ಸುಮಾರು 600ಕ್ಕೂ ಅಧಿಕ ಅಧಿಕಾರಿಗಳು/ಸಿಬಂದಿ ಮತ ಎಣಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ ಫೋನ್‌ ಗಳ ಬಳಕೆಗೆ ಚುನಾವಣಾ ಅಧಿಕಾರಿಗಳು, ವೀಕ್ಷಕರು, ಜಿಲ್ಲಾ ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆದವರಿಗೆ ಮಾತ್ರ ಅವಕಾಶವಿದೆ. ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಒರ್ವ ಎಣಿಕಾ ಏಜೆಂಟ್‌ ಮಾತ್ರ ಮೊಬೈಲ್‌ ಫೋನ್‌ ಕೊಂಡೊಯ್ಯಲು ಅವಕಾಶವಿದೆ. ಅವರು ಕೂಡ ತಮಗೆ ಮೀಸಲಾದ ಕೊಠಡಿಯಲ್ಲಿ ಮಾತ್ರ ಬಳಸಬಹುದು. ಎಣಿಕೆ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿ ಹಾಜರಾಗುವ ಪ್ರತಿನಿಧಿಗಳು ಎಣಿಕೆ ಮುಗಿದ ಬಳಿಕ ಕಾರಿಡಾರ್‌ನಲ್ಲಿ ತಿರುಗಾಡುವುದು ಅಥವಾ ಇನ್ನೊಂದು ಮತ ಎಣಿಕೆ ಕೌಂಟರ್‌ಗೆ ಹೋಗುವಂತಿಲ್ಲ.

ಪೂರ್ಣ ಪ್ರಕ್ರಿಯೆ ಚಿತ್ರೀಕರಣ
ಮತ ಎಣಿಕೆಯ ಪೂರ್ಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಮತಯಂತ್ರವನ್ನು ಸ್ಟ್ರಾಂಗ್‌ರೂಮಿನಿಂದ ಎಣಿಕೆ ಕೊಠಡಿಗೆ ಸಾಗಿಸುವುದು, ಅದನ್ನು ತೆರೆಯುವುದು, ಎಣಿಕೆ ಮಾಡುವುದು ಮುಂತಾದ ಪ್ರಕ್ರಿಯೆಯನ್ನು ಕೆಮರಾ ಮೂಲಕ ದಾಖಲಿಸಲಾಗುತ್ತದೆ.

ಮತ ಎಣಿಕೆ ಏಜೆಂಟರ ನಿಯೋಜನೆ
ಮೇ 15ರಂದು ಬೆಳಗ್ಗೆ 8 ಗಂಟೆಯಿಂದ ಇಟಿಪಿಬಿಎಸ್‌ ಮತ್ತು ಅಂಚೆಯ ಮೂಲಕ ಸ್ವೀಕೃತ ಮತಗಳ ಎಣಿಕೆಯನ್ನು ಚುನಾವಣಾಧಿಕಾರಿ ಮೇಜಿನಲ್ಲಿ ನಡೆಸಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಅನಂತರ ಮತಗಟ್ಟೆಗಳಲ್ಲಿ ಇವಿಎಂನಲ್ಲಿ ದಾಖಲಾದ ಮತ ಎಣಿಕೆ ನಡೆಸಲು ಗೊತ್ತುಪಡಿಸಲಾದ ಎಣಿಕೆ ಮೇಜುಗಳಲ್ಲಿ ನಡೆಸಲಾಗುತ್ತದೆ. ಮತಗಳ ಎಣಿಕೆ ನಡೆಸುವ ಬಗ್ಗೆ ಅಭ್ಯರ್ಥಿಗಳು ನಿಗದಿಪಡಿಸಿದ ನಮೂನೆ 18ರಲ್ಲಿ 14 ಮತ ಎಣಿಕೆ ಮೇಜಿಗೆ ಒಬ್ಬೊಬ್ಬ ಚುನಾವಣಾಧಿಕಾರಿಯಿರುವ ಮೇಜಿನಲ್ಲಿ ತಲಾ ಒಟ್ಟು 15 ಮತ ಎಣಿಕೆ ಏಜೆಂಟರನ್ನು ನೇಮಕ ಮಾಡಲಾಗಿದೆ.

ಕಾರ್ಯಕರ್ತರಿಗೆ ಕಾಲೇಜಿನ ಹೊರಭಾಗದ ಗ್ರೌಂಡ್‌ನ‌ಲ್ಲಿ ಸ್ಥಳ
ಪಕ್ಷದ ಕಾರ್ಯಕರ್ತರು ಕೌಂಟಿಂಗ್‌ ಕೇಂದ್ರಕ್ಕೆ ಬರುವ ಹಿನ್ನೆಲೆಯಲ್ಲಿ ಹಾಗೂ ಅವರಿಗೆ ಕ್ಷಣ ಕ್ಷಣದ ಮಾಹಿತಿ ಒದಗಿಸುವ ನೆಲೆಯಲ್ಲಿ ಕಾಲೇಜಿನ ಹೊರಭಾಗದಲ್ಲಿರುವ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ತೀರ್ಮಾನಿಸಿದೆ. ಅಲ್ಲಿ ಎಲ್‌ಇಡಿ ಪರದೆ ಅಳವಡಿಸಿ ಮಾಹಿತಿ ನೀಡುವ ಬಗ್ಗೆಯೂ ಯೋಚಿಸಲಾಗಿದೆ. ಇಷ್ಟಿದ್ದರೂ, ಕಾರ್ಯಕರ್ತರು ಕಾಲೇಜಿನ ಗೇಟ್‌ ಮುಂಭಾಗದಲ್ಲಿ ಸೇರುವ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆ ಒದಗಿಸಲಾಗುತ್ತದೆ.

ಸಿಬಂದಿಗೆ ಊಟ-ತಿಂಡಿ ಸೌಕರ್ಯ
ಮತ ಎಣಿಕೆ ಕೇಂದ್ರದಲ್ಲಿರುವ ಎಲ್ಲ ಸಿಬಂದಿಗೆ ಬೆಳಗ್ಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಜಿಲ್ಲಾಡಳಿತದ ವತಿಯಿಂದ ಕಾಲೇಜಿನ ಒಳಗಿನ ಆವರಣದಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳ ಪರವಾಗಿ ಅನುಮತಿ ಪಡೆದು ಆವರಣ ಪ್ರವೇಶಿಸುವವರು ಹಣ ಪಾವತಿಸಿ ಊಟ ಮಾಡಲು ಅವಕಾಶವಿದೆ.

ಇಂದು ರಾತ್ರಿಯಿಂದ ನಿಷೇಧಾಜ್ಞೆ ಜಾರಿ
ಮೇ 12ರ ಮತದಾನವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ಜಿಲ್ಲಾಡಳಿತವು, ಮತ ಎಣಿಕೆಯನ್ನು ಕೂಡ ಸುಸೂತ್ರವಾಗಿ ನಡೆಸುವ ಉದ್ಧೇಶದಿಂದ ಮೇ 14ರ ಮಧ್ಯರಾತ್ರಿ 12 ಗಂಟೆಯಿಂದ ಮೇ 15ರ ಮಧ್ಯರಾತ್ರಿ 12ಗಂಟೆಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಹೊರಡಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಆವರಣವನ್ನು ಹೊರತುಪಡಿಸಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ ಸಾರ್ವಜನಿಕ ಸ್ಥಳ, ಕಟ್ಟಡ ಮತ್ತು ಸರಕಾರಿ ಕಚೇರಿ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಆದೇಶ ಹೊರಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *