ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಗೆ ಬಹಿರಂಗ ಪ್ರಚಾರ ಮೇ 10ರಂದು ಸಂಜೆ 6ಕ್ಕೆ ಕೊನೆಗೊಳ್ಳುತ್ತದೆ. ಚುನಾವಣಾ ನೀತಿ ಸಂಹಿತೆ ಪ್ರಕಾರ ಆ ಬಳಿಕ ಬಹಿರಂಗ ಪ್ರಚಾರ ನಡೆಸಲು ಅವಕಾಶವಿಲ್ಲ ಎಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ.
ಚುನಾವಣಾ ಸಿದ್ಧತೆ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಮೇ 10ರ ಸಂಜೆ 6ರ ಬಳಿಕ ಮೆರವಣಿಗೆ, ಬಹಿರಂಗ ಪ್ರಚಾರ ನಡೆಸುವುದಕ್ಕೆ ನಿಷೇಧವಿರುತ್ತದೆ. ಆದರೆ ಅಭ್ಯರ್ಥಿಗಳು, ಏಜೆಂಟರು, ಬೆಂಬಲಿಗರು ಮನೆ ಮನೆಗಳಿಗೆ ತೆರಳಿ ಪ್ರಚಾರ ಮಾಡಲು ಅವಕಾಶವಿದೆ. ಈ ಅವಧಿಯಲ್ಲಿ ಕಲಂ 144 ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ 5 ಮಂದಿಗಿಂತ ಹೆಚ್ಚು ಮಂದಿ ಒಟ್ಟು ಸೇರಿ ಮನೆಮನೆ ಪ್ರಚಾರ ನಡೆಸುವಂತಿಲ್ಲ. ಮತದಾನ ಮುಕ್ತಾಯವಾಗುವ ಸಮಯದ ಹಿಂದಿನ 48 ಗಂಟೆಗಳಲ್ಲಿ ಚುನಾವಣಾ ಪೂರ್ವ ಸಮೀಕ್ಷೆ ನಡೆಸುವುದನ್ನು ನಿಷೇಧಿಸಲಾಗಿದೆ ಎಂದರು.
ಮತದಾನದ ಕೊನೆಯ 48 ಗಂಟೆಗಳಲ್ಲಿ ಕ್ಷೇತ್ರದ ಮತದಾರರಲ್ಲದ ಕಾರ್ಯಕರ್ತರು, ಪಕ್ಷದ ನಾಯಕರು, ತಾರಾ ಪ್ರಚಾರಕರು ಹಾಗೂ ಇತರರು ಆಯಾಯ ಕ್ಷೇತ್ರಗಳಲ್ಲಿ ಇರದಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ. ಈ ಬಗ್ಗೆ ನೇಮಕ ಮಾಡಲಾದ ವಿವಿಧ ಅಧಿಕಾರಿಗಳು, ಪೊಲೀಸರು ಎಲ್ಲ ಹೊಟೇಲ್, ವಸತಿಗೃಹ, ಛತ್ರ ಮುಂತಾದೆಡೆ ಪರಿಶೀಲನೆ ನಡೆಸಿ ದೃಢಪಡಿಸಿಕೊಳ್ಳಲಿರುವರು ಎಂದರು.
ಜಿಲ್ಲೆಯಲ್ಲಿ ಬೆಳ್ತಂಗಡಿ, ಸುಳ್ಯ ಸೇರಿದಂತೆ 60 ಜನವಸತಿ ಕೇಂದ್ರಗಳಿಗೆ ಸೂಕ್ತ ಸಂಚಾರ ವ್ಯವಸ್ಥೆಯ ಕೊರತೆ ಇರುವುದರಿಂದ ಮತದಾನಕ್ಕೆ ಬರಲು ವಾಹನ ವ್ಯವಸ್ಥೆ ಮಾಡುವಂತೆ ಕೋರಿಕೆ ಬಂದಿದ್ದು, ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ವ್ಯವಸ್ಥೆಗೊಳಿಸಲಾಗುವುದು. ಜಿಲ್ಲೆಯಲ್ಲಿ 13 ಮತದಾನ ಕೇಂದ್ರಗಳಲ್ಲಿ ದೂರವಾಣಿ ಸಂಪರ್ಕ ಸಮಸ್ಯೆ ಗುರುತಿಸಲಾಗಿದ್ದು, ಇದಕ್ಕೆ ಸೂಕ್ತ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮತಗಟ್ಟೆಯೊಳಗೆ ಮತದಾರ/ಮತದಾರರ ಕೈಗೂಸು, ಕುರುಡ ಮತ್ತು ದುರ್ಬಲ ಮತದಾರನ ಸಂಗಡಿಗ, ಮತಗಟ್ಟೆ ಸಿಬಂದಿ, ಚುನಾವಣಾ ಕರ್ತವ್ಯ ನಿರ್ವಹಿಸಲು ನಿಯೋಜಿತ ಅಧಿಕಾರಿಗಳು, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ/ಅವರ ಚುನಾವಣಾ ಏಜೆಂಟ್, ಮತದಾರನಿಗೆ ಝಡ್+ ರಕ್ಷಣೆಗೆ ನಿಯೋಜಿತ ಸಮವಸ್ತ್ರ ಧರಿಸದ ಹಾಗೂ ಶಸ್ತ್ರಾಸ್ತ್ರವನ್ನು ಮರೆಮಾಚಿದ ಭದ್ರತಾ ಸಿಬಂದಿಗಳಿಗೆ ಮಾತ್ರ ಪ್ರವೇಶವಿರುತ್ತದೆ ಎಂದವರು, ದ.ಕ. ಜಿಲ್ಲೆಯಲ್ಲಿ ಒಟ್ಟು 517 ಕ್ಲಿಷ್ಟ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ವೆಬ್‌ಕಾಸ್ಟಿಂಗ್/ಸಿ.ಪಿ.ಎಂ.ಎಫ್ ನಿಯೋಜನೆ/ವೀಡಿಯೋಗ್ರಾಫಿ ಮತ್ತು ಮೈಕ್ರೋ ವೀಕ್ಷಕರನ್ನು ನೇಮಕ ಮಾಡಲಾಗಿದೆ ಎಂದವರು ತಿಳಿಸಿದರು. ಮತದಾನಕ್ಕೆ ಮೊದಲು ಅಣುಕು ಮತದಾನ ನಡೆಸಬೇಕಾಗಿರುವುದರಿಂದ ಎಲ್ಲ ಪೊಲಿಂಗ್ ಏಜೆಂಟರು ಬೆಳಗ್ಗೆ 5.45ಕ್ಕೆ ಮತದಾನ ಕೇಂದ್ರದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.

