13BG_RAGHAVESHWARA_2241969f

ಉಳ್ಳಾಲ: ಅಮೃತಧಾರಾ ಗೋಶಾಲೆಯಿಂದ ಗೋ ಕಳ್ಳತನ ನಡೆಸಿದವರು ಕ್ರೌರ್ಯವನ್ನು ಪ್ರದರ್ಶಿಸಿದರೆ, ಅದರ ರಕ್ಷಣೆಗೆ ನಿಂತ ಗೋಶಾಲೆ ಸಿಬ್ಬಂದಿ ಧೈರ್ಯ ಮತ್ತು ಶೌರ್ಯವನ್ನು ಪ್ರದರ್ಶಿಸಿದ್ದಾರೆ ಎಂದು ಶ್ರೀ ಮಹಾಚಂದ್ರಾಪುರ ಮಠಧ ರಾಘವೇಶ್ವರ ಭಾರತಿ ಮಹಾಸ್ವಾಮಿ ತಿಳಿಸಿದ್ದಾರೆ.

ಕೈರಂಗಳದ ಪುಣ್ಯಕೋಟಿನಗರದಲ್ಲಿನ ಅಮೃತಧಾರಾ ಗೋಶಾಲೆಯಲ್ಲಿ ಟಿ.ಜಿ.ರಾಜಾರಾಂ ಭಟ್ ಗೋ ದರೋಡೆ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಕೈಗೊಂಡಿರುವ ಆಮರಣಾಂತ ಉಪವಾಸದ 6ನೇ ದಿನದಂದು ಭೇಟಿ ನೀಡಿ ಗೋಪೂಜೆ ನೆರವೇರಿಸಿ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಗೋವುಗಳ ಜೀವ ಎಷ್ಟು ಅಮೂಲ್ಯವೋ, ಉಪವಾಸ ನಿರತರ ಜೀವವೂ ಅಷ್ಟೇ ಅಮೂಲ್ಯವಾಗಿರುತ್ತದೆ. ರಾಜಾರಾಂ ಭಟ್ ಹಾಗೂ ಅವರ ಜತೆಗೆ ಆಮರಣಾಂತ ಉಪವಾಸ ಕೈಗೊಂಡಿರುವ 40 ಮಂದಿಯ ಆರೋಗ್ಯದಲ್ಲಿ ಏರುಪೇರಾದಲ್ಲಿ ಇಡೀ ಸಮಾಜವೇ ಕಾನೂನಿನ ವಿರುದ್ಧ ನಿಲ್ಲುತ್ತದೆ ಎಂದು ಎಚ್ಚರಿಸಿದರು.

ಹಿಂದೂ ಸಮಾಜ ದೇಶ, ಧರ್ಮದ ಮೇಲೆ ಬಹಳಷ್ಟು ಆಕ್ರಮಣಗಳಾದರೂ ಎಂದಿಗೂ ಕಾನೂನು ಕೈಗೆತ್ತಿಕೊಂಡಿಲ್ಲ. ಸಂವಿಧಾನ ಚೌಕಟ್ಟಿನೊಳಗೆ ಹೋರಾಟಗಳು ನಡೆದಿವೆ. ಅದಕ್ಕಾಗಿ ನ್ಯಾಯ ದೊರೆತಲ್ಲಿ ಅದೇ ವ್ಯವಸ್ಥೆ ಉಳಿಯಲು ಸಾಧ್ಯ. ಸಾತ್ವಿಕರು ಕಾನೂನು ಕೈಗೆತ್ತಿಕೊಂಡಲ್ಲಿ ಸಮಾಜದಲ್ಲಿ ಯಾರೂ ಉಳಿಯಲು ಅಸಾಧ್ಯ. ಪ್ರಳಯವೂ ಆಗಬಹುದು ಎಂದರು.

ಜೀವವನ್ನು ಹಿಂಸಿಸಿ ಕೊಂದು ತಿನ್ನುವುದು ಕೊಳಕು ಸಂಸ್ಕೃತಿಯಾಗಿದ್ದು, ಗೋವಿನ ಪರವಾಗಿ ಮಾಡುತ್ತಿರುವ ಹೋರಾಟ ಅಪೂರ್ಣವಾಗಲು ನಾನು ಎಂದಿಗೂ ಬಿಡುವುದಿಲ್ಲ ಎಂದವರು, ಹೋರಾಟ ಸಂಪೂರ್ಣಗೊಳಿಸುವ ಉದ್ದೇಶದೊಂದಿಗೆ ಸಮಾಜ ಸ್ಪಂದಿಸಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದರೆ ಮತ್ತೆ ಹೋರಾಟಕ್ಕೆ ಬಲ ಬರಲಿದೆ. ಹೋರಾಟ ಪೂರ್ಣವಾಗಬೇಕಿದೆ. ದೇಶದಲ್ಲಿ ಕಾನೂನು ಪ್ರಬಲವಾಗಲು ಎಲ್ಲರೂ ಪ್ರಯತ್ನಿಸಬೇಕಿದೆ ಎಂದರು.

By suddi9

Leave a Reply

Your email address will not be published. Required fields are marked *