ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಸ್ಪರ್ಧಿಸಲಿದೆ. ಆದರೆ, ಯಾವುದೇ ಕ್ಷೇತ್ರಕ್ಕೂ ಈವರೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ’ ಎಂದು ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಕುಂಞಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಎಸ್‌ಪಿ ಮತ್ತು ಸಿಪಿಐ ಜೊತೆ ಚುನಾವಣಾ ಮೈತ್ರಿ ಮಾತುಕತೆ ಪ್ರಗತಿಯಲ್ಲಿದೆ. ಈ ನಡುವೆ ಕೆಲವರು ನಾವೇ ಅಭ್ಯರ್ಥಿಗಳು ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಆ ರೀತಿಯ ವದಂತಿಗಳಿಗೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಿವಿಗೊಡಬಾರದು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ, ರಾಜ್ಯ ಘಟಕದ ಉಪಾಧ್ಯಕ್ಷ ಎ.ಅಮರನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಿ.ಎಂ.ಫಾರೂಕ್ ಸೇರಿದಂತೆ ಹಿರಿಯ ನಾಯಕರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುತ್ತಾರೆ’ ಎಂದರು.
ಮಂಗಳವಾರ ಸಂಜೆ 4 ಗಂಟೆಗೆ ನಗರದ ಪುರಭವನದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ. ಮಾಜಿ ಮೇಯರ್ ಕೆ.ಅಶ್ರಫ್ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಹಲವು ಮುಖಂಡರು ಪಕ್ಷ ಸೇರುತ್ತಾರೆ. ಆದರೆ, ಅಶ್ರಫ್ ಸೇರಿದಂತೆ ಯಾರೊಬ್ಬರಿಗೂ ಟಿಕೆಟ್ ಭರವಸೆ ನೀಡಿಲ್ಲ. ಅವರು ಕೂಡ ಈವರೆಗೆ ಪಕ್ಷದ ಟಿಕೆಟ್ ಕೇಳಿಲ್ಲ ಎಂದು ಹೇಳಿದರು.
ದುರಹಂಕಾರ ಇರಬಾರದು:
‘ಉಳ್ಳಾಲ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಅಶ್ರಫ್ ಹೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಯು.ಟಿ.ಖಾದರ್ ಠೇವಣಿ ಹಣ ನೀಡುತ್ತೇನೆ, ಕಾಂಗ್ರೆಸ್ ಕಾರ್ಯಕರ್ತರನ್ನು ಬೆಂಬಲಕ್ಕೆ ಕಳುಹಿಸುತ್ತೇನೆ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಸಚಿವರಿಗೆ ಈ ಬಗೆಯ ದುರಹಂಕಾರ ಇರಬಾರದು. ಅವರ ಹಣ, ಕಾರ್ಯಕರ್ತರು ಜೆಡಿಎಸ್‌ಗೆ ಬೇಕಿಲ್ಲ. ಸಚಿವರ ದುರಹಂಕಾರದ ಹೇಳಿಕೆಯನ್ನು ನಾವು ಖಂಡಿಸುತ್ತೇವೆ’ ಎಂದರು.
ಜಿಲ್ಲೆಯ ಜನರ ಪಾಲಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಒಂದೇ ಆಗಿವೆ. ಇಲ್ಲಿನ ರೈತರ ಸಮಸ್ಯೆಗಳ ಕುರಿತು ಎರಡೂ ಪಕ್ಷಗಳು ಮಾತನಾಡುತ್ತಿಲ್ಲ. ರಬ್ಬರ್ ಮತ್ತು ಅಡಿಕೆ ಬೆಳೆಗಾರರ ಸಂಕಷ್ಟದ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ. ಈ ವಿಚಾರದಲ್ಲೂ ರಾಜಕೀಯ ಲಾಭಕ್ಕಾಗಿ ಹವಣಿಸುತ್ತಿದ್ದಾರೆ ಎಂದು ಟೀಕಿಸಿದರು.
ಸ್ಪರ್ಧೆ ಕುರಿತು ನಿರ್ಧರಿಸಿಲ್ಲ:
‘ನಾನು ಚುನಾವಣೆಗೆ ಸ್ಪರ್ಧಿಸುವ ಕುರಿತು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಶೀಘ್ರದಲ್ಲಿ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇನೆ’ ಎಂದು ಅಮರನಾಥ ಶೆಟ್ಟಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
—
ಮಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಇದೇ ಮಂಗಳವಾರ ನಗರದಲ್ಲಿ ರಾಜಕೀಯೇತರ ಕ್ಷೇತ್ರಗಳ ಪ್ರತಿನಿಧಿಗಳ ಜೊತೆ ಸಂವಾದ ನಡೆಸಲಿದ್ದಾರೆ.
ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಕುಂಞಿ, ‘ನಗರದ ತಾಜ್ ಹೋಟೆಲ್‌ನಲ್ಲಿ ಮಾರ್ಚ್ 6ರಂದು ಬೆಳಿಗ್ಗೆ 9.30ಕ್ಕೆ ಆರಂಭವಾಗುವ ಸಂವಾದ ಕಾರ್ಯಕ್ರಮ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದೆ. ಬರಹಗಾರರು, ವೈದ್ಯರು, ಎಂಜಿನಿಯರುಗಳು, ವಕೀಲರು, ಪ್ರಾಧ್ಯಾಪಕರು, ರೈತರು, ಉದ್ಯಮಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ 300 ಮಂದಿ ಸಂವಾದದಲ್ಲಿ ಭಾಗವಹಿಸುವರು’ ಎಂದರು.
ಈ ಕಾರ್ಯಕ್ರಮದಲ್ಲಿ ರಾಜಕೀಯ ಕ್ಷೇತ್ರದವರು ಮಾತನಾಡುವುದಿಲ್ಲ. ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡುವುದಕ್ಕಾಗಿ ವಿವಿಧ ಕ್ಷೇತ್ರಗಳಿಂದ ಅಭಿಪ್ರಾಯ ಸಂಗ್ರಹಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಈ ಸಂವಾದ ನಡೆಯಲಿದೆ. ಪ್ರಜಾಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದೇ ಇದರ ಮೂಲ ಆಶಯ ಎಂದು ಹೇಳಿದರು.
ರಾಜ್ಯದಲ್ಲಿ ಕೈಗೆತ್ತಿಕೊಳ್ಳಬೇಕಿರುವ ಅಭಿವೃದ್ಧಿ ಯೋಜನೆಗಳು, ವಿವಿಧ ವರ್ಗದ ಜನರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳು, ಸಂಪನ್ಮೂಲ ಸಂಗ್ರಹಣೆ, ಬಳಕೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಸಂವಾದದಲ್ಲಿ ಭಾಗವಹಿಸುವ ಎಲ್ಲರ ಅಭಿಪ್ರಾಯಗಳನ್ನು ಕುಮಾರಸ್ವಾಮಿ ಪಡೆಯಲಿದ್ದಾರೆ ಎಂದರು.
