ಮುದ್ದೇಬಿಹಾಳ: ಶಾಲೆಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆಗೈಯ್ಯಲು ಯತ್ನಿಸಿದ ಘಟನೆ ತಾಲೂಕಿನ ನಾಗಬೇನಾಳ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಗ್ರಾಮದಲ್ಲಿರುವ ತನ್ನ ತೋಟದ ಮನೆಯಿಂದ ನಾರಾಯಣಪೂರದಲ್ಲಿದ್ದ ಪ್ರೌಢಶಾಲೆಗೆ ತೆರಳುತ್ತಿದ್ದ ಪ್ರೌಢಶಾಲಾ ವಿದ್ಯಾರ್ಥಿನಿಯನ್ನು ಅದೇ ಗ್ರಾಮದ ಸಮೀಪದ ಬಾಳೆ ತೋಟಕ್ಕೆ ಹೊತ್ತೊಯ್ದ ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.ಆಕೆ ತಪ್ಪಿಸಿಕೊಳ್ಳಲು ಚೀರಾಡಿದಾಗ ಕೊರಳಿಗೆ ಟವೆಲ್ ಸುತ್ತಿ ಕೊಲೆ ಮಾಡಲು ಯತ್ನಿಸಿದ್ದಾರೆ.
ವಿದ್ಯಾರ್ಥಿನಿ ಚೀರಾಟ ಕೇಳುತ್ತಿದ್ದಂತೆ ಸ್ಥಳಕ್ಕೆ ತಕ್ಷಣ ಧಾವಿಸಿದ ಸ್ಥಳೀಯರು ಆಕೆಯನ್ನು ರಕ್ಷಿಸಿ ಸ್ಥಳದಲ್ಲಿದ್ದ ಒಬ್ಬ ಆರೋಪಿಯನ್ನು ಹಿಡಿದು, ಧರ್ಮದೇಟು ಕೊಟ್ಟಿದ್ದಾರೆ.
ಈ ಕುರಿತು ವಿದ್ಯಾರ್ಥಿನಿಯ ತಂದೆ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪ್ರತಿಭಟನೆ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ತೀ್ವ್ರ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಹಾಗೂ ಮಹಿಳಾ ಪರ ಸಂಘಟನೆ ಪದಾಧಿಕಾರಿಗಳು ಆಸ್ಪತ್ರೆಗೆ ಧಾವಿಸಿ ಕುಟುಂಬದವರನ್ನು ಭೇಟಿಯಾಗಿ ವಿದ್ಯಾರ್ಥಿನಿಯ ಆರೋಗ್ಯ ವಿಚಾರಿಸಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು,ತಾಲೂಕಾ ಕುರುಬರ ಸಂಘದ ಪದಾಧಿಕಾರಿಗಳು,ಮಹಿಳಾ ಸಂಘಟನೆಯ ಪದಾಧಿಕಾರಿಗಳು ಟೈರ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ರಸ್ತೆ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ಸಂಚಾರ ಅಸ್ತವ್ಯಸ್ತಗೊಂಡಿತು.ಡಿವೈಎಸ್‍ಪಿ ಮಹೇಶ್ವರಯ್ಯ.ಸಿಪಿಐ ರವಿಕುಮಾರ ಕಪ್ಪತ್ತನವರ ಮತ್ತಿತರರು ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ದುರ್ಗಾ ಶಕ್ತಿ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಸಂಗಮ್ಮ ದೇವರಳ್ಳಿ,ತಾಲೂಕಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ ಮಾತನಾಡಿ, ಮನುಷ್ಯತ್ವ ಕಳೆದುಕೊಂಡ ಮೃಗಗಳೇ ಈ ರೀತಿ ವರ್ತಿಸಲು ಸಾಧ್ಯ.ಮೊದಲು ದುಷ್ಕರ್ಮಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡ ಪರಶುರಾಮ ಪವಾರ,ನಿರ್ಮಲಾ ರಾಯಗೊಂಡ,ಮಂಜುಳಾ ಕೆಸರಟ್ಟಿ,ಗಿರಿಜಾ ಮೋಟಗಿ,ಮಡಿವಾಳಮ್ಮ ಹಿರೇಕುರುಬರ,ಮುನ್ನಿ ಮುಲ್ಲಾ ಮತ್ತಿತರರು ಇದ್ದರು.
ಆಸ್ಪತ್ರೆಗೆ ದೌಡು:
ಬಾಲಕಿಯನ್ನು ಚಿಕಿತ್ಸೆಗೆಂದು ದಾಖಲಿಸಿದ್ದ ಸರಕಾರಿ ಆಸ್ಪತ್ರೆಗೆ ಜನಪ್ರತಿನಿಧಿಗಳ ದಂಡೇ ಆಗಮಿಸಿ ಕುಟುಂಬದವರಿಗೆ ಧೈರ್ಯ ಹೇಳಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಎಸ್.ಪಾಟೀಲ ಕೂಚಬಾಳ,ನಾಲತವಾಡದ ಎಂ.ಎಸ್.ಪಾಟೀಲ,ಜಿಪಂ ಮಾಜಿ ಸದಸ್ಯ ನಿಂಗಪ್ಪಗೌಡ ಬಪ್ಪರಗಿ,ರವಿ ಜಗಲಿ,ಮುಖಂಡರಾದ ವರ್ತೂರ್ ರಕ್ಷಿತ್,ಏಪಿಎಂಸಿ ಅಧ್ಯಕ್ಷ ಗುರು ತಾರನಾಳ ಮತ್ತಿತರರು ಭೇಟಿ ನೀಡಿದರು.
ಎಸ್.ಪಿ ಜೈನ್ ಭೇಟಿ:
ವಿಷಯ ತಿಳಿಯುತ್ತಿದ್ದಂತೆ ನಾಗಬೇನಾಳ ಗ್ರಾಮಕ್ಕೆ ಎಸ್‍ಪಿ ಕುಲದೀಪಕುಮಾರ ಜೈನ್ ಭೇಟಿ ನೀಡಿದರು.ಬಳಿಕ ಮುದ್ದೇಬಿಹಾಳ ತಾಲೂಕಾ ಆಸ್ಪತ್ರೆಗೆ ದಾಖಲಾಗಿರುವ ಬಾಲಕಿಯ ಆರೋಗ್ಯ ವಿಚಾರಿಸಿ ಸಂತ್ರಸ್ಥೆಯಿಂದ ಹೇಳಿಕೆ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಪಿ ಘಟನೆಯಲ್ಲಿ ಒಬ್ಬ ಆರೋಪಿ ನಾಲತವಾಡದ ವೀರೇಶ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಅತ್ಯಾಚಾರ ಘಟನೆ ಸಾಮೂಹಿಕವೋ ವಯಕ್ತಿಕವಾಗಿ ಒಬ್ಬನೇ ಮಾಡಿದ್ದಾನೆಯೋ ಎಂದು ತಿಳಿಸಲು ಸದ್ಯಕ್ಕೆ ಸಾಧ್ಯವಿಲ್ಲ.ಸಂತ್ರಸ್ಥೆಯಿಂದ ಎಲ್ಲ ವಿವರಣೆ ಪಡೆದುಕೊಂಡ ಬಳಿಕ ತಿಳಿಸಲಾಗುತ್ತದೆ.ಘಟನೆಯಿಂದ ಆಕೆ ಭಯಗೊಂಡಿದ್ದು ಕೌನ್ಸಿಲಿಂಗ್ ನಡೆಸಲಾಗುವುದು ಎಂದು ತಿಳಿಸಿದರು.

