ಬೆಂಗಳೂರು: ಕರ್ನಾಟಕ ಪ್ರಜಾಕೀಯ ಜನತಾ (ಕೆಪಿಜೆಪಿ)ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ನಟ ಉಪೇಂದ್ರ ಅವರನ್ನು ಪಕ್ಷದಿಂದ ಉಚ್ಚಾಟಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮಾರ್ಚ್ 3 ರಂದು ನಡೆದ ಕೆಪಿಜೆಪಿ ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಕೆಪಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್‌ಗೌಡ ಹಾಗೂ ಉಪೇಂದ್ರರ ನಡುವೆ ಪಕ್ಷ ಸಂಘಟನೆ ಹಾಗೂ ಟಿಕೆಟ್ ವಿಚಾರದಲ್ಲಿ ಭಿನ್ನಮತ ಸ್ಪೋಟಗೊಂಡಿದೆ. 13 ರಾಷ್ಟ್ರೀಯ ಸಮಿತಿ ಸದಸ್ಯರು ಉಪೇಂದ್ರ ಅವರ ವಿರುದ್ಧವೇ ಸಿಡಿದೆದ್ದಿದ್ದಾರೆ ಎನ್ನಲಾಗುತ್ತಿದೆ.
ಉಪೇಂದ್ರ ಅವರು ಯಾರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಆರೋಪವನ್ನ ಪದಾಧಿಕಾರಿಗಳು ಮಾಡುತ್ತಿದ್ದಾರೆ.
ರಾಷ್ಟ್ರೀಯ ಸಮಿತಿಯ 13 ಸದಸ್ಯರ ಪೈಕಿ 3 ಸ್ಥಾನಗಳನ್ನ ಹೆಂಡತಿ, ಅಣ್ಣ ಸೇರಿ ಕುಟುಂಬದವರಿಗೇ ನೀಡಲು ಉಪೇಂದ್ರ ಪಟ್ಟು ಹಿಡಿದಿದ್ದರು. ಇದಕ್ಕೆ ಸಮಿತಿ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಪಕ್ಷಕ್ಕೂ ನನಗೂ ಸಂಬಂಧವಿಲ್ಲ ಎಂದು ಉಪೇಂದ್ರ ಎದ್ದು ಹೋದರು ಎಂದು ಕೆಪಿಜೆಪಿ ಉಪಾಧ್ಯಕ್ಷ ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೆಪಿಜೆಪಿಯಲ್ಲಿ ಮೂಡಿರುವ ಭಿನ್ನಮತವನ್ನ ಉಪೇಂದ್ರ ಅವರು ಕೂಡ ಒಪ್ಪಿಕೊಂಡಿದ್ದಾರೆ. ನಾಳೆ ಉಪೇಂದ್ರ ಅವರು ಕೆಪಿಜೆಪಿಯ ಸಭೆ ಕರೆದಿದ್ದು, ಟಿಕೆಟ್ ಆಕಾಂಕ್ಷಿಗಳಿಗೆ ಆಹ್ವಾನ ನೀಡಿದ್ದಾರೆ. ನಾಳಿನ ಸಭೆಯಲ್ಲಿ ಉಪೇಂದ್ರ ಅವರು ಟಿಕೆಟ್ ಆಕಾಂಕ್ಷಿಗಳ ಜೊತೆ ಯಾವ ವಿಚಾರ ಚರ್ಚಿಸುತ್ತಾರೆ ಎಂಬುದು ಈಗ ಕುತೂಹಲ ಕೆರಳಿಸಿದೆ.

![]](http://www.suddi9.com/wp-content/uploads/2018/03/unnamed-file.jpg)