ಬಳ್ಳಾರಿ: ರಾಜ್ಯದಲ್ಲಿ ಕಾಂಗ್ರೆಸ್ ಮುಖಂಡ-ಕಾರ್ಯಕರ್ತರ ಗೂಂಡಾಗಿರಿ ಮಿತಿ ಮೀರುತ್ತಿದ್ದು, ಪೊಲೀಸರ ಮೇಲೆಯೂ ಹಲ್ಲೆಗೈದು ಅಟ್ಟಹಾಸ ಮೆರೆದಿರುವ ಘಟನೆ ನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ನಗರದ ಹೊಸಪೇಟೆಯಲ್ಲಿ ರಾತ್ರಿ ಸುಮಾರು 11;00ರ ವೇಳೆ ಇಬ್ಬರು ಹಾಲಿ ಕಾಂಗ್ರೆಸ್ ಶಾಸಕರ ಬೆಂಬಲಿಗರ ಗುಂಪೊಂದರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು, ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಪೇದೆಗಳ ಮೇಲೆ ಈ ಗುಂಪು ಹಲ್ಲೆ ನಡೆಸಿದೆ. ಅಲ್ಲದೆ, ಪೇದೆಗಳ ಸಮವಸ್ತ್ರ ಎಳೆದು, ವಾಕಿ-ಟಾಕಿ ಕಿತ್ತುಕೊಂಡು ಗಂಡಾಗಿರಿ ನಡೆಸಿದ್ದಾರೆ.
ಹಲ್ಲೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತರ ಈ ಫುಂಡಾಟಿಕೆಗೆ ವಿರೋಧ ವ್ಯಕ್ತವಾಗಿದೆ.
ಸರ್ಕಾರಿ ನೌಕರನ ಮೇಲೆ ಹಲ್ಲೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದವರನ್ನು ಇಂದೇ ಬಂಧಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಎರಡೂ ಗುಂಪಿನ ಸದಸ್ಯರು ಆನಂದ್ ಸಿಂಗ್ ಮತ್ತು ಸಂತೋಷ್ ಲಾಡ್ ಅವರ ಬೆಂಬಲಿಗರು ಎನ್ನಲಾಗುತ್ತಿದ್ದು, ಮಾಜಿ ಶಾಸಕರು ಮತ್ತು ಸಚಿವರಿಂದ ಘಟನೆ ಬಗ್ಗೆ ಈ ವರೆಗೆ ಪ್ರತಿಕ್ರಿಯೆ ದೊರೆತಿಲ್ಲ.

