ಬೆಂಗಳೂರು: ಕಂಪೆನಿಯ ಟಾಯ್ಲೆಟ್ ನಲ್ಲಿ ಮಹಿಳಾ ಸಿಬ್ಬಂದಿಗಳ ಗುರಿಯಾಗಿಸಿ ಪೋಟೊ ತೆಗೆಯುತ್ತಿದ್ದ ಸ್ವಚ್ಛತಾ ಸಿಬ್ಬಂದಿಯೋರ್ವನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಲ್ಲಿನ ಇಂದಿರಾನಗರಲ್ಲಿರುವ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಮಂಗಳವಾರ ನಡೆದಿದೆ.
ಧರ್ಮೇಂದ್ರ ಕುಮಾರ್ ಯಾದವ್ (24) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
ಧರ್ಮೇಂದ್ರ ಉತ್ತರ ಪ್ರದೇಶ ಮೂಲದವನಾಗಿದ್ದು, ಇಂದಿರಾನಗರದಲ್ಲಿರುವ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈತ ಮಹಿಳಾ ಟೆಕ್ಕಿಯರನ್ನು ಕಚೇರಿ ಹಾಗೂ ಶೌಚಾಲಯದಲ್ಲಿ ಗುರಿಯಾಗಿಸಿ ಫೋಟೊ ತೆಗೆಯುತ್ತಿದ್ದ. ಇದನ್ನು ಗಮನಿಸಿದ ಮಹಿಳಾ ಟೆಕ್ಕಿಯೋರ್ವರು ಆತನ ಕೈಯಿಂದ ಮೊಬೈಲ್ ಕಿತ್ತು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಲವಾರು ಫೋಟೊಗಳು ಮೊಬೈಲ್ ನಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಬಳಿಕ ಆಡಳಿತ ಮಂಡಳಿ ಈತನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಅದರಂತೆ ಪೊಲೀಸರು ಆರೋಪಿ ಧರ್ಮೇಂದ್ರನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

