ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಡಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಕುಟುಂಬಗಳು ದಲಿತ ಮೀಸಲು ನಿಧಿಯಿಂದ ಸಹಾಯಧನ ಪಡೆಯಬೇಕಾದರೆ ಜಮೀನಿನ ಖಾತಾ ಸಲ್ಲಿಕೆಯನ್ನು ಕಡ್ಡಾಯಗೊಳಿಸಿರುವ ಮಂಗಳೂರು ಮಹಾನಗರ ಪಾಲಿಕೆಯ ಧೋರಣೆ ದಲಿತ ವಿರೋಧಿ ಧೋರಣೆ ಎಂದು ದಲಿತ ಹಕ್ಕುಗಳ ಸಮಿತಿ ಖಂಡಿಸಿದೆ.
ಕಳೆದ ಶತಮಾನದ ಬ್ರಿಟಿಷರಿಂದ, ಕುದ್ಮುಲ್ ರಂಗರಾವ್ ಮಿಷನಿನ ಅಡಿಯಲ್ಲಿ ಪಡೆದ ಜಮೀನಿನಲ್ಲಿ ಪರಂಪರಾಗತವಾಗಿ ನೆಲೆಸಿರುವ ಕುಟುಂಬಗಳು ಮ್ಯೂಟೇಶನ್ ಮತ್ತಿತರೆ ಪಟ್ಟಾ ದಾಖಲೆಗಳನ್ನು ಹೊಂದಿರುವುದಿಲ್ಲ. ಸಾವಿರಾರು ರೂಪಾಯಿ ಖರ್ಚಿನ ಈ ಪ್ರಕ್ರಿಯೆಗಳನ್ನು ಅಳವಡಿಸಲು ದಿನಕೂಲಿ ಮಾಡುವ ದಲಿತ ಕುಟುಂಬಗಳಿಗೆ ಅಸಾಧ್ಯವಾಗುತ್ತದೆ.
ಆದುದರಿಂದ ದಲಿತ ಸಮುದಾಯದ ವಾಸ್ತವಿಕ ಪರಿಸ್ಥಿತಿಯ ಬಗ್ಗೆ ಕಿಂಚಿತ್ತೂ ಗಮನ ಹರಿಸದಿರುವ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ದಲಿತ ಸಮುದಾಯದ ಸ್ವಂತ ಮನೆ ಹೊಂದುವ ಕನಸಿಗೆ ಎಳ್ಳು ನೀರು ಬಿಡುವ ಮೂಲಕ ದಲಿತ ವಿರೋಧಿ ನೀತಿ ಅನುಸರಿಸಿದೆ. ಈಗಾಗಲೇ ದಲಿತ ಸಮುದಾಯದ ಎಲ್ಲಾ ಯೋಜನೆಗಳನ್ನು ರದ್ದು ಪಡಿಸಿರುವ ಮಹಾನಗರ ಪಾಲಿಕೆಯ ಕಾಂಗ್ರೆಸ್ಸ್ ಆಡಳಿತವು ದಲಿತರ ಪಾಲಿಗೆ ಕಂಟಕವಾಗಿದೆ. ದಲಿತ ಸಮುದಾಯದ ಸಂವಿಧಾನ ಬದ್ಧ ಕಾನೂನಿಗೆ ವ್ಯತಿರಿಕ್ತವಾಗಿ ವರ್ತಿಸಿದೆ. ಅದರ ಪರಿಣಾಮವಾಗಿ ದಲಿತ ಮೀಸಲು ನಿಧಿಯನ್ನು ದಲಿತೇತರ ಯೋಜನೆಗಳಿಗೆ ವಿನಿಯೋಗಿಸುತ್ತಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ.
ಸಭೆಯಲ್ಲಿ ನಗರ ಸಮಿತಿ ಕಾರ್ಯದರ್ಶಿ ಪ್ರಶಾಂತ್ ಎಂ.ಬಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಮಿತಿ ನಾಯಕರಾದ ತಿಮ್ಮಯ್ಯ, ಕಿಶೋರ್ ಪೊರ್ಕೋಡಿ, ಕೃಷ್ಣ ತಣ್ಣೀರುಬಾವಿ, ರಘುವೀರ್ ಮತ್ತು ನಾಗೇಂದ್ರರವರುಗಳು ಭಾಗವಹಿಸಿದರು.
