ಚಿಕ್ಕಮಗಳೂರು: ಬಿಜೆಪಿ, ಆರೆಸ್ಸೆಸ್ ನವರು ಉಗ್ರಗಾಮಿಗಳು ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಬಳಿ ದಾಖಲೆಗಳಿದ್ದರೆ ತಕ್ಷಣ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿ, ಇವೆರಡನ್ನೂ ನಿಷೇಧಿಸುವಂತೆ ಆಗ್ರಹಿಸಲಿ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಭಕ್ತ ಸಂಘಟನೆಗಳ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಪಿಎಫ್‌ಐ ಸಂಘಟನೆ ನಿಷೇಧ ಮಾಡಬೇಕೇ ಹೊರತು ಬಜರಂಗದಳ, ಶ್ರೀರಾಮಸೇನೆ ದಳವನ್ನಲ್ಲ ಎಂದರು.
ಮೂಡಿಗೆರೆಯ ವಿದ್ಯಾರ್ಥಿನಿ ಧನ್ಯಶ್ರೀ ಆತ್ಮಹತ್ಯೆಗೆ ಶ್ರದ್ಧಾಂಜಲಿ ಹೇಳುತ್ತೇವೆ ಎಂದ ಅವರು, ರಾಜ್ಯ ಸರ್ಕಾರ ಆರೆಸ್ಸೆಸ್, ಶ್ರೀರಾಮಸೇನೆ ಹಾಗೂ ಬಜರಂಗದಳ ಸಂಘಟನೆಗಳನ್ನು ನಿಷೇಧಿಸಲು ತಾಕತ್ತಿದೆಯೇ ಎಂದು ಪ್ರಶ್ನಿಸಿದರು.
ಬೆಳಗಾವಿಯಿಂದ ಗೋಮಾಂಸ ಸಾಗಣೆ ಮಾಡಲು ಬಿಡುವುದಿಲ್ಲ, ತಾಕತ್ತಿದ್ದರೆ ಗೋವಾ ಸರಕಾರ ಗೋರಕ್ಷಕರನ್ನು ತಡೆಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

