ಉಳ್ಳಾಲ: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಬಶೀರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ನೇತ್ರಾವತಿ ನದಿಗೆ ಎಸೆದಿದ್ದು, ಈ ಬಗ್ಗೆ ಎಸಿಪಿ ವೆಲಂಟೈನ್ ನೇತೃತ್ವದ ಪೊಲೀಸರ ತಂಡ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಶೀರ್ ಹತ್ಯೆಗೆ ಬಳಸಿದ್ದ ಮಾರಕಾಸ್ತ್ರ ಹಾಗೂ ಮೊಬೈಲುಗಳನ್ನು ನೇತ್ರಾವತಿ ನದಿಗೆ ಎಸೆದು ಕೇರಳದ ಮಂಜೇಶ್ವರ ಕಡೆಗೆ ಪರಾರಿಯಾಗಿದ್ದೇವೆ ಎಂದು ಈ ಪ್ರಕರಣದ ಬಂಧಿತ ನಾಲ್ವರು ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರ ತಂಡ ಮುಳುಗುತಜ್ಞರನ್ನು ಉಪಯೋಗಿಸಿ ನೇತ್ರಾವತಿ ನದಿಯಲ್ಲಿ ಮಾರಕಾಸ್ತ್ರ ಹಾಗೂ ಮೊಬೈಲಿಗೆ ಶೋಧ ಕಾರ್ಯ ಮುಂದುವರಿಸಿದೆ.
ಡಿ.3ರ ತಡರಾತ್ರಿ ನಗರದ ಕೊಟ್ಟಾರ ಬಳಿ ಬಶೀರ್ ಅವರು ಅಂಗಡಿ ಮುಚ್ಚಿ ಮನೆಗೆ ಹಿಂತಿರುಗುವ ವೇಳೆ ಆರೋಪಿಗಳಾದ ಸಂದೇಶ್, ಧನುಷ್, ಸೃಜಿತ್ ಮತ್ತು ಕಿಶನ್ ಅವರನ್ನು ತಡೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೆ ಯತ್ನಿಸಿದ್ದರು. ಬಳಿಕ ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಬಶೀರ್ ಮೃತಪಟ್ಟಿದ್ದರು.


