ಬೆಂಗಳೂರು: ನಮ್ಮದು ಇನ್‌ಕ್ಲೂಸಿವ್ ಹಿಂದುತ್ವ. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ ಹಿಂದುತ್ವ. ನಿಮ್ಮಲ್ಲಿರುವುದು ಯಾವ ಹಿಂದುತ್ವ? ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಗಿ ಆದಿತ್ಯನಾಥ್ ಅವರು ಹಿಂದುತ್ವ ಹಾಗೂ ಆಹಾರದ ಬಗ್ಗೆ ಮಾತನಾಡಿ ಜನರನ್ನು ಕೋಮು ಭಾವನೆಗೆ ತಳ್ಳಲು ಅಸ್ತ್ರವಾಗಿ ಮಾಡುತ್ತಿದ್ದಾರೆ ಎಂಬುದು ನನ್ನ ಭಾವನೆ ಎಂದು ಆರೋಪಿಸಿದರು.
ಯೋಗಿಯವರು ಪಕ್ಷ ಹಾಗೂ ಬಿಜೆಪಿ ಸಿದ್ಧಾಂತದ ಬಗ್ಗೆ ಮಾತನಾಡಿದ್ದರೆ ನಮ್ಮ ತಕರಾರಿಲ್ಲ. ಬದಲಾಗಿ ಇನ್ನೊಂದು ಸಿಎಂ ಆಡಳಿದ ಬಗ್ಗೆ ಮಾತನಾಡುವುದು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದ ಅವರು, ನಮ್ಮದು ಪ್ರಗತಿ ಪರ ರಾಜ್ಯವಾಗಿದ್ದು, ಇಲ್ಲಿ ಒಳ್ಳೆಯ ಆಡಳಿತ ಜನತೆಗೆ ಸಿಗುತ್ತಿದೆ ಎಂದರು.
ದೇಶದ ಕ್ರೈಂ ರೇಟ್ ನಲ್ಲಿ ಉತ್ತರಪ್ರದೇಶ ಮುಂದಿದ್ದು, ಇದು ನೀವು ಮಾಡುವ ಆಡಳಿತ ಎಂದು ಟೀಕಿಸಿದರು.
ಹಾರ್ಡ್ ಹಿಂದುತ್ವ ಯಾವುದು? ಕೋಮುವಾದ, ಕೊಲೆ ಮಾಡಿಸೋದಾ ಅಥವಾ ಜನರಿಗೆ ಧರ್ಮದವರನ್ನು ಬೇರೆ ರೀತಿಯಲ್ಲಿ ಕಾಣುವಂತೆ ಮಾಡುವುದಾ ಎಂದು ಪ್ರಶ್ನಿಸಿದರು.
ಪರಿವರ್ತನಾ ಯಾತ್ರೆಯಲ್ಲಿ ರಾಜ್ಯಕ್ಕೆ ಮುಂದೇನು ಮಾಡುತ್ತೇವೆಂಬುದನ್ನು ಹೇಳದ ಬಿಜೆಪಿಗರು, ಹೆಣ ಇಟ್ಟು ಚಿಲ್ಲರೆ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ತಮ್ಮದೇ ಸರಕಾರವಿದ್ದು, ರಾಜ್ಯದ ರೈತರ ಸಾಲವನ್ನು ಪ್ರಧಾನಿ ಮೋದಿ ಅವರು ಪೂರ್ಣ ಪ್ರಮಾಣ ಮನ್ನಾ ಮಾಡುವಂತೆ ಮಾಡಲಿ ಎಂದು ವ್ಯಂಗ್ಯವಾಡಿದರು.
