ಬಳ್ಳಾರಿ: ಗುಜರಾತ್ ನ ಚುನಾವಣಾ ಫಲಿತಾಂಶ ರಾಜ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೊಮವಾರ ಹಗರಿಬೊಮ್ಮನ ಹಳ್ಳಿಯಲ್ಲಿ ಮಾಲ್ವಿ ಜಲಾಶಯಕ್ಕೆ ಶಾಶ್ವತ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ 18 ಶಾಸಕರು ಬಿಜೆಪಿಗೆ ಸೇರಿದ್ದರಿಂದ ಗುಜರಾತಿನಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ ಕಳೆದಕ್ಕಿಂತ ಈ ಬಾರೀ ಪಕ್ಷಕ್ಕೆ ಹೆಚ್ಚು ಸೀಟ್ ಲಭಿಸಿದೆ. ಇದಕ್ಕೆ ರಾಹುಲ್ ಗಾಂಧಿ ಅವರ ಪ್ರಭಾವವೇ ಕಾರಣ ಎಂದರು.
ಗುಜರಾತಿಗೆ ಅಮಿತ್ ಶಾ, ಪ್ರಧಾನಿ ಮೋದಿ 50ಕ್ಕೂ ಹೆಚ್ಚು ಬಾರಿ ಭೇಟಿ ಹಾಗೂ ದೇಶದ ಎಲ್ಲ ಬಿಜೆಪಿ ಮುಖ್ಯಮಂತ್ರಿಗಳು ಅಲ್ಲಿ ನೆಲೆಸಿ ಪ್ರಚಾರ ನಡೆಸಿದ್ದರಿಂದ್ದರಿಂದ ಅಲ್ಲಿಯ ಜನತೆ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಆದರೆ ಕರ್ನಾಟಕದ ಜನತೆ ರಾಜ್ಯ ಸರಕಾರದ ಅಭಿವೃದ್ಧಿ ಗಮನಿಸಿ ಮತ ನೀಡುತ್ತಾರೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದರು.

