ಮಂಗಳೂರು: ಪರವಾನಿಗೆ ಇಲ್ಲದೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ನಗರದ ನೇತ್ರಾವತಿ ನದಿ ತಟದ ಆಡಂಕುದ್ರು ಎಂಬಲ್ಲಿಗೆ ಇಂದು ಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳು, ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿದ್ದರಿಂದ 8 ಮರಳು ಲಾರಿಗಳನ್ನು ವಶಕ್ಕೆ ಪಡೆದು, ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.
ಆಡಂಕುದ್ರುವಿಗೆ ಅಸಿಸ್ಟಂಟ್ ಕಮಿಷನರ್ ಡಾ. ಅಶೋಕ್ ಹಾಗೂ ತಹಶೀಲ್ದಾರ್ ಮೋಹನ್ ರಾವ್ ನೇತೃತ್ವದ ತಂಡ ಇಂದು ಬೆಳಗ್ಗೆ ದಾಳಿ ನಡೆಸಿದ ವೇಳೆ ಪರವಾನಿಗೆ ಇಲ್ಲದೆ ಮರಳುಗಾರಿಕೆ ನಡೆಸುತ್ತಿದ್ದುದನ್ನು ಪತ್ತೆ ಹಚ್ಚಿದರು. ಬಳಿಕ ಬುಲ್ಢೋಝರ್ ಸಹಿತ 8 ಲಾರಿಗಳನ್ನು ವಶಕ್ಕೆ ಪಡೆದುಕೊಂಡರು.
mng
ಜಿಲ್ಲೆಯಲ್ಲಿ ದೀರ್ಘ ಅವಧಿಯ ಮಳೆ ಇದ್ದ ಕಾರಣ ಮರಳುಗಾರಿಕೆಗೆ ಇಳಿದಿರಲಿಲ್ಲ. ಇಂದಷ್ಟೇ ಇಳಿದಿದ್ದೇವೆ. ಬುಲ್ದೋಝರ್ ಗಳನ್ನು ಬೋಟಿನಿಂದ ಮರಳು ತೆಗೆದು ಟ್ರಕ್ ಗಳಿಗೆ ಲೋಡ್ ಮಾಡಲಷ್ಟೇ ಬಳಸಲಾಗುತ್ತಿತ್ತು. ನದಿಯಿಂದ ಮರಳು ತೆಗೆಯಲು ಬಳಸಿಲ್ಲ.
ಯಾವುದೇ ನಿಯಮ ಉಲ್ಲಂಘಿಸಿ ನಾವು ಮರಳುಗಾರಿಕೆ ಮಾಡುತ್ತಿಲ್ಲ ಎಂದು ಮರಳು ಗಣಿಗಾರರು ವಾದಿಸಿದರೂ, ದಾಳಿ ನಡೆಸಿದ ಅಧಿಕಾರಿಗಳು ಅವರ ಮಾತಿಗೆ ಬೆಲೆಕೊಡಲಿಲ್ಲ. ಸ್ಥಳದಲ್ಲಿದ್ದ 9 ಟ್ರಕ್ ಗಳ ಪೈಕಿ ಒಂದಕ್ಕೆ ಮಾತ್ರ ಪರವಾನಿಗೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರವಾನಿಗೆ ಇಲ್ಲದೆ ಇದ್ದ 8 ಲಾರಿಗಳನ್ನು ವಶಕ್ಕೆ ಪಡೆದ ಬಳಿಕ ಉಳ್ಳಾಲ ಪೊಲೀಸರಿಗೆ ಅಸಿಸ್ಟೆಂಟ್ ಕಮಿಷನರ್ ನೇತೃತ್ವದ ತಂಡ ಹಸ್ತಾಂತರಿಸಿದೆ.
ದಾಳಿಯ ವೇಳೆ ರಾಜೇಶ್ ಫೆರಾವೋ ಎಂಬವರಿಗೆ ಮಾತ್ರ ಪರವಾನಿಗೆ ಇತ್ತು ಎಂದು ತಿಳಿದುಬಂದಿದೆ.
ಇದೇ ವೇಳೆ ಆಡಂಕುದ್ರುವಿನಲ್ಲಿ ಪೈಪ್ ಲೈನ್ ನ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶಾಸಕ ಜೆ. ಆರ್. ಲೋಬೋ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು. ಮರಳು ಗಣಿಗಾರರು ಒಂದುವೇಳೆ ತಪ್ಪು ಮಾಡಿದ್ದು ಕಂಡು ಬಂದರೆ ದಂಡ ವಿಧಿಸುವಂತೆ ಶಾಸಕ ಲೋಬೋ ಅಧಿಕಾರಿಗಳಿಗೆ ಸೂಚಿಸಿದರು. ಸ್ಥಳದಲ್ಲಿ ಉಳ್ಳಾಲ ಪೊಲೀಸ್ ಠಾಣಾಧಿಕಾರಿ ರಮೇಶ್ ಹಾನಾಪುರ ನೇತೃತ್ವದ ಪೊಲೀಸರ ತಂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *