ಬಂಟ್ವಾಳ: ಸಮಾಜದಲ್ಲಿ ಪ್ರತಿಯೊಬ್ಬರಲ್ಲಿಯೂ ದೇವರ ಮನಸ್ಸು ಮತ್ತು ಮಗುವಿನ ಮುಗ್ಧತೆ ಇದ್ದಾಗ ಎಂದಿಗೂ ಸಂಘರ್ಷ ಉಂಟಾಗುವುದಿಲ್ಲ. ಇದಕ್ಕಾಗಿ ಎಲ್ಲರೂ ನುಡಿದಂತೆ ನಡೆದು, ಮಾತಿನಂತೆ ಕೃತಿ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.ತಾಲ್ಲೂಕಿನ ಮಂಚಿ ಕೊಳ್ನಾಡು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಗುರುವಾರ ನಡೆದ ಶ್ರೀ ದೇವರ ಬಾಲಾಲಯ ಪ್ರತಿಷ್ಠೆ, ಸುತ್ತು ಪೌಳಿ ಹಾಗೂ ದೈವಗಳ ಗುಡಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಈ ಕ್ಷೇತ್ರವೂ ಸೇರಿದಂತೆ ಪೊಳಲಿ ಮತ್ತು ನಿಟಿಲಾಪುರ ಸದಾಶಿವ ದೇವಸ್ಥಾನದಲ್ಲಿ ಕೂಡಾ ಸ್ವತಃ ನನ್ನ ನೇತೃತ್ವದಲ್ಲಿ ಜೀರ್ಣೋದ್ದಾರ ಕಾಮಗಾರಿ ನಡೆಯುತ್ತಿದೆ ಎಂದರು.
ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಕಳೆದ 20 ವರ್ಷಗಳ ಹಿಂದೆ ಇಲ್ಲಿನ ಅಭಿವೃದ್ದಿ ಕೆಲಸದಲ್ಲಿ ನನಗೆ ಭಾಗವಹಿಸಲು ಸಾಧ್ಯವಾಗಿದೆ. ಇದೀಗ ಮತ್ತೆ ಇಂತಹ ಅವಕಾಶ ದೊರೆತಿದ್ದು, ಎಲ್ಲಾ ನೋವುಗಳನ್ನು ಮರೆತು ಒಟ್ಟಾಗಿ ನಿರ್ಮಲ ಮನಸ್ಸಿನಿಂದ ಜೀರ್ಣೋದ್ಧಾರ ಕಾರ್ಯದಲ್ಲಿ ಪಾಲ್ಗೊಂಡಾಗ ದೇವರು ಸಂತೃಪ್ತಿಗೊಳ್ಳುತ್ತಾರೆ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೆರ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜಿಲ್ಲಾ ನಿರ್ದೇಶಕ ಚಂದ್ರಶೇಖರ ನೆಕ್ಕಿಲಾಡಿ, ಉದ್ಯಮಿ ಎಂ.ಮಹಾಬಲ ಕೊಟ್ಟಾರಿ, ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಶುಭ ಹಾರೈಸಿದರು. ಹಿರಿಯರಾದ ಈಶ್ವರ ಭಟ್ ಕೋಕಲ ಮತ್ತಿತರರು ಇದ್ದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಪ್ರಾಸ್ತಾವಿಕ ಮಾತನಾಡಿ, ಸುಮಾರು ರೂ 3.5ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಾಮಗಾರಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಜೀರ್ಣೊದ್ಧಾರ ಸಮಿತಿ ಕಾರ್ಯಾಧ್ಯಕ್ಷ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ಚಿದಾನಂದ ರಾವ್ ವಂದಿಸಿದರು. ಸಾಹಿತಿ ವಿಜಯ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು. ಇದೇ ವೇಳೆ ಮಂಕುಡೆ ರಾಮಣ್ಣ ಆಚಾರ್ ಮತ್ತು ಕೆಮ್ಮಿಂಜೆ ನಾಗೇಶ ತಂತ್ರಿ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕಾರ್ಯಕ್ರಮ ನಡೆಯಿತು.
