ನವದೆಹಲಿ, ಆ.೫: ದೇಶದ ಉಪರಾಷ್ಟ್ರಪತಿ ಆಯ್ಕೆಗೆ ಇಂದು ನಡೆಯುತ್ತಿರುವ ಮತದಾನದಲ್ಲಿ ಸಂಸದರು ಉತ್ಸಾಹದಿಂದ ಮತ ಚಲಾಯಿಸಿದರು. ಬೆಳಗ್ಗೆ ೧೦ ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಸಂಜೆ ಐದು ಗಂಟೆಯವರೆಗೂ ಮತ ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಎನ್.ಡಿ.ಎ.ಅಭ್ಯರ್ಥಿ ಎನ್.ವೆಂಕಯ್ಯನಾಯ್ಡು ೧೩ನೇ ಉಪರಾಷ್ಟ್ರಪತಿಯಾಗು ಆಯ್ಕೆಯಾಗಿದ್ದಾರೆ
ಸಂಸತ್ ಭವನದಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದುದು ಕಂಡುಬಂತು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಅರುಣ್ ಜೇಟ್ಲಿ ಸೇರಿದಂತೆ ಕೇಂದ್ರ ಸಚಿವರು, ಸಂಸದರು ತಮ್ಮ ಹಕ್ಕು ಚಲಾಯಿಸಿದರು.
ಎನ್‌ಡಿಎ ಅಭ್ಯಥಿ ಎಂ.ವೆಂಕಯ್ಯನಾಯ್ಡು ಹಾಗೂ ವಿರೋಧ ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿ ಅವರು ಕಣದಲ್ಲಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದ ಜೆಡಿಯು ಮತ್ತು ಬಿಜೆಡಿ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಮಾತ್ರ ವಿರೋಧ ಪಕ್ಷದ ಅಭ್ಯರ್ಥಿ ಗೋಪಾಲಕೃಷ್ಣ ಗಾಂಧಿಗೆ ಬೆಂಬಲ ಸೂಚಿಸಿವೆ. ಆದರೂ ಎನ್‌ಡಿಎ ಸದಸ್ಯರ ಸಂಖ್ಯೆ ಹೆಚ್ಚಿರುವುದರಿಂದ ಎಂ.ವೆಂಕಯ್ಯನಾಯ್ಡು ಉಪ ರಾಷ್ಟ್ರಪತಿಯಾಗಸಿದೆ
ಮತದಾನ ಮುಗಿದ ತಕ್ಷಣ ಮತ ಎಣಿಕೆ ನಡೆದು ಸಂಜೆ ೭ ಗಂಟೆಯ ವೇಳೆಗೆ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಲಿದೆ. ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯುತ್ತಿದ್ದು, ಯಾವುದೇ ರಾಜಕೀಯ ಪಕ್ಷಗಳು ವಿಪ್ ಜಾರಿಮಾಡುವಂತಿಲ್ಲ.
ಚುನಾವಣೆ ವೇಳೆ ವಿಶೇಷ ಪೆನ್‌ನಲ್ಲೇ ತಮ್ಮ ಆಯ್ಕೆ ಅಭ್ಯರ್ಥಿಯ ಹೆಸರಿನ ಮುಂದೆ ಗುರುತು ಮಾಡಬೇಕು. ಬೇರೆ ಪೆನ್‌ಗಳನ್ನು ಬಳಕೆ ಮಾಡಿದ್ದೇ ಆದರೆ ಆ ಮತ ಅಸಿಂಧುವಾಗುತ್ತದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ರಹಸ್ಯ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಯಾವುದೇ ಪಕ್ಷಗಳು ತಮ್ಮ ಸಂಸದರಿಗೆ ಇಂಥಹದ್ದೇ ಅಭ್ಯರ್ಥಿಗಳಿಗೆ ಮತ ಹಾಕಬೇಕೆಂದು ವಿಪ್ ಜಾರಿ ಮಾಡುವಂತಿಲ್ಲ.
ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿಯವರ ಅಧಿಕಾರಾವಧಿ ಆಗಸ್ಟ್ ೧೦ಕ್ಕೆ ಅಂತ್ಯಗೊಳ್ಳಲಿದೆ. ಅನ್ಸಾರಿ ಸತತ ೨ ಅವಧಿಗೆ ಉಪರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.
ಸಂಸತ್ತಿನ ಉಭಯ ಸದನಗಳ ಒಟ್ಟು ಸದಸ್ಯ ಬಲ ೭೯೦, ಆದರೆ ಸದ್ಯ ೩ ಸ್ಥಾನ ಖಾಲಿಯಿದೆ. ಲೋಕಸಭೆಯಲ್ಲಿ ಎರಡು ಹಾಗೂ ರಾಜ್ಯಸಭೆಯಲ್ಲಿ ಒಂದು ಸ್ಥಾನ ಖಾಲಿ ಇದೆ. ಜೊತೆಗೆ ಓರ್ವ ಬಿಜೆಪಿ ಸಂಸದರಿಗೆ ಮತ ಚಲಾಯಿಸಲು ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ೭೮೬ ಜನರಿಗೆ ಮತ ಚಲಾವಣೆಯ ಅವಕಾಶ ಕಲ್ಪಿಸಲಾಗಿತ್ತು. ಈ ಪೈಕಿ ಈಗಾಗಲೇ ೪೮೫ ಸದಸ್ಯರು ನಾಯ್ಡು ಅವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ಹೀಗಾಗಿ ಈ ಚುನಾವಣೆ ಕೇವಲ ಔಪಚಾರಿಕವಾದಂತಾಗಿದೆ. ಸೂಕ್ತ ರೀತಿಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ.೫೧ ರಷ್ಟು ಮತ ಪಡೆವರು ವಿಜಯಶಾಲಿಗಳಾಗಿ ಹೊರಹೊಮ್ಮಲಿದ್ದಾರೆ.
ನನ್ನನ್ನು ಉಪರಾಷ್ಟ್ರಪತಿ ಅಭ್ಯರ್ಥಿ ಮಾಡಿರುವುದಕ್ಕೆ ನಾನು ಸಂತೋಷಗೊಂಡಿದ್ದೇನೆ. ಹೆಚ್ಚಿನ ಪ್ರಮುಖ ಪಕ್ಷಗಳು ನನಗೆ ಬೆಂಬಲ ಸೂಚಿಸಿವೆ. ನಾನು ಜಯಗಳಿಸುವುದು ಖಚಿತ
ಎಂ.ವೆಂಕಯ್ಯನಾಯ್ಡು
ಎನ್‌ಡಿಎ ಅನುಭವಿ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ನನ್ನ ಸ್ಪರ್ಧೆ ತಾಂತ್ರಿಕವಾಗಿ ಅವರ ವಿರುದ್ಧ ನಡೆಯುತ್ತಿದ್ದರೂ ವಾಸ್ತವಿಕವಾಗಿ ಅವರ ವಿರುದ್ಧ ಅಲ್ಲ. ಇದು ಎರಡು ಪಕ್ಷಗಳು ಮತ್ತು ಎರಡು ವ್ಯಕ್ತಿಗಳ ನಡುವೆ ನಡೆಯುತ್ತಿರುವ ಚುನಾವಣೆಯಲ್ಲ
