ಪಶ್ಚಿಮ ಘಟ್ಟಗಳ ಸಂರಕ್ಷಣೆ ಯೋಜನೆಗಳು ಭೀತಿ ಇರುವಾಗಲೇ ವೈಲ್ಡ್‍ಲೈಪ್ ವಿಸ್ತರಿಸುವ ಪ್ರಕ್ರಿಯೆಗೆ ಸುಳ್ಯ ತಾಲೂಕಿನ ಎರಡು ಗ್ರಾಮಗಳು ಸೇರ್ಪಡೆಯಾಗಿ ಕೃಷಿಗೆ ಸಂಚಕಾರ ಬರಲಿದೆ ಎಂದು ಕೊಲ್ಲಮೊಗ್ರು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಮೀದ್ ಇಡ್ನೂರು ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪುಷ್ಪಗಿರಿ ವನ್ಯಧಾಮ, ಆನೆಕಾರಿಡಾರ್, ಗ್ರೇಟರ್ ತಲಕಾವೇರಿ ಬಳಿಕ ಡಾ. ಕಸ್ತೂರಿ ರಂಗನ್ ಇತ್ಯಾದಿ ಹೆಸರಲ್ಲಿ ಯೋಜನೆಗಳು ಈ ಹಿಂದೆ ಬಂದಿತ್ತು. ಈ ಭಾಗದ ಕೃಷಿಕರ ಚಳುವಳಿ ಮತ್ತು ತೀವೃ ವಿರೋಧಕ್ಕೆ ಮಣಿದು ಸರಕಾರ ಮತ್ತು ಅಧಿಕಾರಿಗಳು ಜಾರಿಗೆ ತರಲು ಹಿಂದೇಟು ಹಾಕಿದ್ದರು. ಅದಾದ ಬಳಿಕ ಇದೀಗ ವೈಲ್ಡ್‍ಲೈಪ್ ಪ್ರದೇಶ ವಿಸ್ತರಿಸುವ ಪ್ರಕ್ರೀಯೆಗೆ ಸುಳ್ಯ ತಾಲೂಕಿನ ಎರಡು ಗ್ರಾಮಗಳು ಬಲಿಯಾಗುತ್ತಿವೆ. ಈ ಎರಡು ಗ್ರಾಮಗಳು ಸೂಕ್ಷ್ಮವಲಯ ವ್ಯಾಪ್ತಿಗೆ ಒಳಪಡುತ್ತಿದ್ದು ಇದರಿಂದ ಕೃಷಿಕರು ಆತಂಕಗೊಂಡಿದ್ದಾರೆ ಎಂದರು.
ಕರಡು ಅಧಿಸೂಚನೆಯಲ್ಲಿ ತಿಳಿಸಿದಂತೆ ಜನವಸತಿ ಪ್ರದೇಶಗಳು ಸೂಕ್ಷ್ಮ ವಲಯಗಳಾಗಿ ಗುರುತಿಸಿದಲ್ಲಿ ಆ ಸ್ಥಳಗಳಲ್ಲಿ ಹಲವಾರು ಕಾನೂನುಗಳು ಜಾರಿಯಾಗಲ್ಪಟ್ಟು ರೈತರ ಕೃಷಿ ಭೂಮಿ, ಭೂಮಿ, ಮೂಲಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಇತ್ಯಾದಿಗಳಿಂದ ಬದುಕಿನ ಹಕ್ಕುಗಳಿಗೂ ಚ್ಯುತಿ ಬಂದಿದೆ. ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ತೊಂದರೆ ನೀಡುವ ಕೆಲಸ ನಮ್ಮ ಭಾಗದಲ್ಲಿ ಆಗುತ್ತಿದೆ. ಪರಿಸರ ವಲಯ ವಿಸ್ತರಿಸುವ ಕಾರಣ ಜನಜೀವನದ ಮೇಲೂ ಭಾರಿ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಭರತ್ ಮುಂಡೋಡಿ, ವಸಂತ ಕಿರಿಭಾಗ, ಭರತ್ ಮುಂಡೋಡಿ ಇದ್ದರು.
ಸೂಕ್ಮ್ಮ ಪರಿಸರ ವಲಯ ವಿಸ್ತರಿಸುವುದರಿಂದ ಗ್ರಾಮಗಳ ಜನವಸತಿ ಪ್ರದೇಶಗಳು ಹಾನಿಗೊಳಗಾಗಲಿದ್ದು, ಜನಜೀವನದ ಮೇಲೆ ಅಪಾರ ಪ್ರಮಾಣದ ಕಷ್ಟ ನಷ್ಟಗಳುಂಟಾಗುವ ಸಾಧ್ಯತೆ ಇದೆ.
ರೈತ ವಿರೋಧಿ ಯೋಜನೆಗೆ ಅವಕಾಶ ನೀಡಬಾರದು. ಅವಕಾಶ ನೀಡಿದೆ ಆದಲ್ಲಿ ವಿವಿಧ ಸಂಘಟನೆಗಳು ರಾಜಕೀಯ ರಹಿತವಾಗಿ ಪ್ರತಿಭಟನೆ ನಡೆಸಲಿದೆ.
– ಭರತ್ ಮುಂಡೋಡಿ, ನೀರ್ಚಾಲು ಗ್ರಾಮದ ಕೃಷಿಕರು.
ಏನಿದು ಯೋಜನೆ? ಯಾಕೆ ಕೃಷಿಕರಿಗೆ ಆತಂಕ!
ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿಸುವ ಯೋಜನೆಯಿಂದ ದ.ಕ ಜಿಲ್ಲೆಯ 7 ಗ್ರಾಮಗಳು ಸೂಕ್ಷ್ಮ ವಲಯಕ್ಕೆ ಸೇರ್ಪಡೆಯಾಗಲಿವೆ. ಸುಳ್ಯ ತಾಲೂಕಿನ ಕಲ್ಮಕಾರು ಮತ್ತು ಬಾಳುಗೋಡು ಈ ಇಕೋ ಸೆನ್ಸಿಟಿವ್ ಝೋನ್ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟೂ ಗ್ರಾಮಗಳು ಈ ಯೋಜನೆ ವ್ಯಾಪ್ತಿಗೆ ಒಳಪಡಿಸುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಇದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ. ಗ್ರಾಮಗಳ ಸೇರ್ಪಡೆಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೆ ಕಾರ್ಯೋನ್ಮುಖವಾಗಿರುವ ಕುರಿತು ಮಾಹಿತಿಗಳು ದೊರಕಿವೆ.
ಮರಣ ಶಾಸನಕ್ಕೆ ಸಿದ್ಧರಾಗಿ
ಸೂಕ್ಷ್ಮ ವಲಯಕ್ಕೆ ಜನವಸತಿ ಪ್ರದೇಶ ಸೇರ್ಪಡೆಗೆ ಕೃಷಿಕರ ತೀವೃ ವಿರೋಧ ಇದೆ. ಕಲ್ಮಕಾರು ಭಾಗದಲ್ಲಿ ಹಳದಿ ರೋಗ ಶೇ. 60% ರಷ್ಟು ಹಾನಿಗೊಳಿಸಿದೆ. ಇದೀಗ ವನ್ಯಧಾಮದ ಆಸುಪಾಸಿನ ಪ್ರದೇಶಗಳ ಸೇರ್ಪಡೆ ಸಂದರ್ಭ ಈ ಎರಡೂ ಗ್ರಾಮಗಳು ಸೇರ್ಪಡೆ ಆಗುತ್ತಿವೆ. ಆದರೆ ಇನ್ನೂ ರೈತರು ಪೂರ್ಣ ಪ್ರಮಾಣದಲ್ಲಿ ಎಚ್ಚೆತ್ತಿಲ್ಲ. ತಮ್ಮ ಜೀವನದ ಪ್ರಶ್ನೆ ಹಾಗೂ ಬದುಕಿನ ವಿಚಾರ ಬಂದಾಗಲೂ ಅಸಡ್ಡೆ ಬಿಟ್ಟು ಎದ್ದೇಳದಿದ್ದಲ್ಲಿ ಮರಣ ಶಾಸನಕ್ಕೆ ಸಿದ್ಧತೆ ಮಾಡಬಹುದು.
– ಪ್ರದೀಪ್ ಕುಮಾರ್, ವಕೀಲರು
