ಮಂಗಳೂರು: ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಮತ್ತು ಕೃಷಿಭೂಮಿ ಸಂರಕ್ಷಣಾ ಸಮಿತಿಯ ಹೋರಾಟದ ಫಲವಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ 1966ರ ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿದೆ ಎಂದು ವೇದಿಕೆಯ ಮುಖಂಡರಾದ ವಿದ್ಯಾ ದಿನಕರ್ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ. ಕೆಐಎಡಿಬಿ ಮೂಲಕ ಭೂಸ್ವಾಧೀನತೆ ಕೈಗೊಳ್ಳಲು, ಕೇಂದ್ರ ಸರ್ಕಾರವು ಕಾರ್ಯರೂಪಕ್ಕೆ ತಂದಿರುವ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಅಧಿನಿಯಯ 2013 ರ ನೀತಿಯನ್ನು ಅಳವಡಿಸಿಯೇ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ. ಆ ಮೂಲಕ ಮಂಗಳೂರಿನಲ್ಲಿ ಭೂಸ್ವಾಧೀನಕ್ಕೆ ಹೊಂಚು ಹಾಕಿರುವ ಸುಮಾರು 850 ಎಕರೆ ಫಲವತ್ತಾದ ಭೂಮಿ ಕೆಐಎಡಿಬಿ ಕೈತಪ್ಪಿಹೋಗಲಿದೆ ಎಂದರು.

ಸರ್ಕಾರ ಹಳೆಯ ಕೆಐಎಡಿಬಿ ಕಾಯ್ದೆಯನ್ನು ಬಳಸಿ, ಬಲಾತ್ಕಾರದ ಭೂ ಸ್ವಾಧೀನವನ್ನು ಮುಂದುವರಿಸಿರುವ ಅಕ್ರಮವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದು, ಕೈಗಾರಿಕೆಗೆ ಬಳಸದೆ ಇನ್ನೂ ತನ್ನಲ್ಲಿಟ್ಟುಕೊಂಡಿರುವ ಖಾಲಿ ಕೃಷಿ ಭೂಮಿಯ ಬಗ್ಗೆ ಸರ್ಕಾರ ಜಿಲ್ಲಾಧಿಕಾರಿಯವರಿಂದ ವರದಿ ಕೇಳಿದೆ. ಆದರೆ, ಜಿಲ್ಲಾಧಿಕಾರಿ ಈವರೆಗೂ ವರದಿ ಸಲ್ಲಿಸಿಲ್ಲವೆಂದು ಅವರು ತಿಳಿಸಿದ್ದಾರೆ.ಕರಾವಳಿ ಕರ್ನಾಟಕ ಜನಾಭಿವೃದ್ಧಿ ವೇದಿಕೆ ಮತ್ತು ಕೃಷಿ ಭೂಮಿ ಸಂರಕ್ಷಣಾ ಸಮಿತಿ ಸದಸ್ಯರು ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿದ್ದು, ಹಳೆಯ ಕೆಐಎಡಿಬಿ ಕಾಯ್ದೆಯನ್ನು ಬಳಸಿ ಬಲಾತ್ಕಾರದ ಭೂ ಸ್ವಾಧೀನತೆಯನ್ನು ಕೈಬಿಡುವಂತೆ ಮತ್ತು ಭೂ ಸ್ವಾಧೀನತೆಯಲ್ಲಿ ಪಾರದರ್ಶಕ, ಭೂಸಂತ್ರಸ್ತರ ಪರವಾಗಿರುವ 2013ರ ಹೊಸ ನೀತಿಯನ್ನು ಅನುಸರಿಸುವಂತೆ ಹಲವಾರು ಬಾರಿ ಸರ್ಕಾರಕ್ಕೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.ಮಂಗಳೂರು ತಾಲೂಕಿನಲ್ಲಿ ಎಂಆರ್‌ಪಿಎಲ್ 4ನೇ ಹಂತದ ವಿಸ್ತರಣೆಗಾಗಿ ಪೆರ್ಮುದೆ, ಕುತ್ತೆತ್ತೂರು ಮತ್ತು ಇತರ ಗ್ರಾಮಗಳಲ್ಲಿ ಕೃಷಿಯೋಗ್ಯವಾದ ಭೂಮಿಯನ್ನು ಬಲಾತ್ಕಾರವಾಗಿ ಸ್ವಾಧೀನಪಡಿಸಲು 2016, ಡಿಸೆಂಬರ್ 29ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಈ ಎಲ್ಲಾ ಅಂಶಗಳನ್ನು ಮತ್ತೆ ಸರ್ಕಾರದ ಗಮನಕ್ಕೆ ತರಲಾಗಿದೆ.
ಕಾನೂನು ಸಮರವನ್ನೂ ಕೈಗೊಂಡಿದ್ದು, ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿಯವರ ಏಕಸದಸ್ಯ ಪೀಠವೂ 1966ರ ಕೆಐಎಡಿ ಕಾಯ್ದೆಯು ಒಳಗೊಂಡಿರುವ ಭೂಸ್ವಾಧೀನ ಕ್ರಮ 2013ರ ನೀತಿಗಿಂತ ಭಿನ್ನವಾಗಿದೆ. ಅದು ದೇಶದ ಸಂವಿಧಾನದ 254(2)ನೆ ಪರಿಚ್ಛೇದದ ನೀತಿಯನ್ವಯ ಸ್ವತಂತ್ರವಾಗಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟದೆ. ಈ ಆದೇಶದ ಹಿನ್ನೆಲೆ ಕೆಐಎಡಿಬಿ ಅಧಿಸೂಚನೆ ಅಸಿಂಧು ಎನಿಸಿದ್ದರೂ ಅವರು ಇದನ್ನು ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಆದರೆ, ಭೂಸ್ವಾಧೀನದಲ್ಲಿ ಅಕ್ರಮವಾಗುವುದನ್ನು ತಡೆಯಲು ಇದು ಅಗತ್ಯವಾಗಿದ್ದು, ಸರ್ಕಾರವೂ ಈ ಅಂಶವನ್ನು ಮನಗಂಡಿದೆ ಎಂದು ಹೇಳಿದರು.
