ಮಂಗಳೂರು:ಅನೇಕ ಮಹಿಳಾ ಲೇಖಕಿಯರು ಯಕ್ಷಗಾನ ಪ್ರಸಂಗಗಳನ್ನು ಬರೆದಿದ್ದಾರಾದರೂ ಅವು ಬೆಳಕಿಗೆ ಬಂದದ್ದು ವಿರಳ. ಆದರೆ ಬಿ.ಕೆ. ಶ್ರೀಮತಿ ರಾವ್‍ರವರು ಬರೆದ ಚೊಚ್ಚಲ ಕೃತಿ ಇತ್ತೀಚೆಗೆ ಕದ್ರಿ ದೇವಳದಲ್ಲಿ ಬಿಡುಗಡೆಗೊಂಡು ಖ್ಯಾತ ಕಲಾವಿದರ ಕೈಯಲ್ಲಿ ಚೆನ್ನಾಗಿ ಮೂಡಿ ಬಂತು.

ಪ್ರಸಂಗದಲ್ಲಿ ಪ್ರಯೋಗವೆನಿಸದೆ ಎಲ್ಲಾ ಕಲಾವಿದರೂ ಚೆನ್ನಾಗಿ ಅಭಿನಯಿಸಿ ಲೇಖಕರ ಆಶಯವನ್ನು ಯಥಾವತ್ತಾಗಿ ಬಿಂಬಿಸಿದರು. ಸುಧಾಕರ್ ರಾವ್ ಪೇಜಾವರ ಮತ್ತು ಕಥಾನಾಯಕ ಅಜಮಿಳನ ಪಾತ್ರವನ್ನು ನಿರ್ವಹಿಸಿದ ಬಸವರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತ  ವರ್ಕಾಡಿ ರವಿ ಅಲೆವೂರಾಯ, ಸಂಘಟಕ ದೇವಾನಂದ ಭಟ್ಟರೂ ಯಶಸ್ಸಿಗೆ ಕಾರಣಕರ್ತರು. ಓರ್ವ ಪ್ರೌಢ ಲೇಖಕಿಯಾಗಿ ಹೆಸರುವಾಸಿಯಾಗಿದ್ದ ಬಿ.ಕೆ. ಶ್ರೀಮತಿ ರಾವ್‍ರವರು ಯಕ್ಷಗಾನ ಪ್ರಸಂಗಗಳಲ್ಲೂ ಮಿಂಚಿದ್ದಾರೆ.ಹಾಡಲು ಏನೂ ಕಷ್ಟವಾಗದ ಸಾಹಿತ್ಯ ರಚನೆ, ಕಥೆಯ ಓಘ ಎಲ್ಲವೂ ನುರಿತವರು ಬರೆದಂತಿದೆ. ಅಜಮಿಳನ ಕಥೆಯಲ್ಲಿ ವೈಕುಂಠದಲ್ಲಿ ಜಗದ ಬಗ್ಗೆ, ದಶಾವತಾರದ ಬಗ್ಗೆ ಲಕ್ಷ್ಮೀನಾರಾಯಣರು ಚರ್ಚಿಸಿಕೊಳ್ಳುತ್ತಿದ್ದಂತೆ ನಾರದರ ಆಗಮನವಾಗುತ್ತದೆ. ಹರಿಯ ಆಜ್ಞೆಯಂತೆ ನಾರದ ಹರಿನಾಮದ ಮಹಿಮೆ ಮತ್ತು ಪ್ರಸಾರಕ್ಕಾಗಿ ಶ್ರೀಹರಿಯಿಂದ ಆಜ್ಞೆ ಪಡೆದು ಭೂಲೋಕಕ್ಕೆ ಬರುತ್ತಾನೆ.

ಆಗ ಅಜಮಿಳನ ಪ್ರವೇಶವಾಗುತ್ತದೆ. ವನಸಾಹಿತ್ಯಗಳನ್ನು ಸಂಗ್ರಹಿಸಲು ಕಾಡಿಗೆ ಬರುತ್ತಾನೆ. ಅಲ್ಲಿ ಆತ ಗಣಿಕೆಯೊಬ್ಬಳ ಸ್ನೇಹಕ್ಕೆ ಬೀಳುತ್ತಾನೆ. ಮನೆ, ಮಡದಿ, ಮಕ್ಕಳು ಎಲ್ಲವನ್ನೂ ಮರೆತು ಇವಳೊಂದಿಗೆ ಕಾಡಿನಲ್ಲಿಯೇ ದಿನ ಕಳೆಯುತ್ತಾನೆ. ಬಹುವರ್ಷಗಳ ಸಂಸಾರದಲ್ಲಿ ಜನಿಸಿದ ಮಕ್ಕಳಿಗೆಲ್ಲಾ ಶ್ರೀಹರಿಯ ಹೆಸರನ್ನೇ ಇಟ್ಟ. ಕೊನೆಗೆ ರುಗ್ಣಶಯ್ಯೆಗೆ ಬಿದ್ದು ಅಸುನೀಗುವಾಗ ನಾರಾಯಣಾ ಎನ್ನಲಾಗದೇ ಇದ್ದರೂ ಅರ್ಧರ್ಧ ಉಚ್ಛರಿಸುತ್ತಾ ಹರಿನಾಮದೊಂದಿಗೆ ಪ್ರಾಣಬಿಟ್ಟ. ಯಮ ತನ್ನ ಚಿತ್ರಗುಪ್ತನ ಸಹಾಯದಿಂದ ವಿಷಯ ತಿಳಿದು ತನ್ನ ಭಟರನ್ನು ಕರೆದು ಅಜಮಿಳ (ಪ್ರೇತಾತ್ಮ) ನನ್ನು ಕರೆತರಲು ಆಜ್ಞಾಪಿಸುತ್ತಾನೆ. ಆದರೆ ಹರಿಯ ನಾಮದ ಬಲದಿಂದ ಅಳಿದ ಅಜಮಿಳನನ್ನು ವಿಷ್ಣುದಾಸರು ತಡೆಯುತ್ತಾರೆ. ಕೊನೆಗೆ ಯಮಭಟರು ಕೈಸೋತು ಯಮನಿಗೆ ವಿಷಯ ತಿಳಿಸುತ್ತಾರೆ. ಆಗ ಯಮ “ಮುಟ್ಟದಿರಿ ಮುಟ್ಟದಿರಿ ಮುರಹರನ ಸ್ಮರಿಸುತಿಹನು” ಎನ್ನುತ್ತಾ ಶ್ರೀಹರಿಯ ಬಳಿಗೆ ಬಂದು ಶರಣಾಗತನಾದ. ಶ್ರೀಹರಿಯು ಯಮನಿಗೆ ಸರಿಯಾಗಿ ತಿಳಿಹೇಳಿ ಹರಿದಾಸರನ್ನು ಹೇಗೆ ನಡೆಸಬೇಕು ಎಂಬುದನ್ನು ವಿವರಿಸಿ ಅಜಮಿಳನಿಗೆ ಮೋಕ್ಷವನ್ನು ಕರುಣಿಸಿದ್ದಾನೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ. ಉತ್ತಮ ಕಥಾ ಹಂದರವುಳ್ಳ ಈ ಪ್ರಸಂಗ ಕಾಲಮಿತಿ ಪ್ರಯೋಗಕ್ಕೆ ತಕ್ಕುದಾದುದು.

ಪ್ರಫುಲ್ಲಚಂದ್ರ ಭಟ್ ನೆಲ್ಯಾಡಿ, ದೇವಾನಂದ ಭಟ್, ಕೃಷ್ಣಪ್ರಕಾಶ ಉಳಿತ್ತಾಯ, ಯೋಗೀಶ್ ಉಳೆಪ್ಪಾಡಿ ಮತ್ತು ಮಧುಸೂಧನ ಅಲೆವೂರಾಯರು ಹಿಮ್ಮೇಳ ಕಲಾವಿದರಾಗಿ ಕಥೆಯನ್ನು ಉತ್ತಮ ಪ್ರಸ್ತುತಪಡಿಸುವಲ್ಲಿ ಸಹಕರಿಸಿದರು.
ಸುನಿಲ್ ಪಲ್ಲಮಜಲು, ಸಂದೀಪ ಶೆಟ್ಟಿ ದೋಟ, ಪೂರ್ಣೇಶ ಆಚಾರ್ಯ, ರವಿ ಅಲೆವೂರಾಯ, ಗೋಣಿಬೀಡು ಸಂಜಯ ಕುಮಾರ್ ಶೆಟ್ಟಿ, ರವಿ ಭಟ್ ನೆಲ್ಯಾಡಿ, ರಂಜಿತ್ ಆಚಾರ್ಯ, ಅಕ್ಷಯ್, ಪ್ರೇಮರಾಜ್ ಕೊೈಲ, ಶ್ರೀವತ್ಸ ಭಟ್ ರಂಗವೈಭವವನ್ನು ಸಾಕ್ಷಾತ್ಕಾರಗೊಳಿಸಿದ ಹೆಮ್ಮೆಯ ಕಲಾವಿದರು. ಅಜಮಿಳನ ವಿಶೇಷ ಆಭರಣಾಲಂಕಾರಗಳು ಆ ಪಾತ್ರವನ್ನು ಬಿಂಬಿಸುವಲ್ಲಿ ವಿಫಲವಾಯಿತೆನ್ನುವುದನ್ನು ಬಿಟ್ಟರೆ ಅತ್ಯುತ್ತಮ ಪ್ರದರ್ಶನ ಎನ್ನಲು ಅಡ್ಡಿಯಿಲ್ಲ. ಅಜಮಿಳನ ಮೋಕ್ಷದ ಮೂಲಕ ಯಕ್ಷರಂಗವನ್ನು ಪ್ರವೇಶಿಸಿದ ಬಿ.ಕೆ. ಶ್ರೀಮತಿ ರಾವ್ ರಂತಹ ಕಲಾವಿದರ ಸಂಖ್ಯಾ ವೃದ್ಧಿಯಾಗಲಿ ಎಂಬುದು ನಮ್ಮ ಹಾರೈಕೆ.

By suddi9

Leave a Reply

Your email address will not be published. Required fields are marked *