ಬಂಟ್ವಾಳ: ಹಿಂದೊಮ್ಮೆ ತುಳುನಾಡಿನ ಇತಿಹಾಸದಲ್ಲಿ ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯ ಕ್ಷೇತ್ರವಾಗಿ ವೈಭವದಿಂದ ಮೆರೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬುಡೋಳಿ ಗ್ರಾಮದ ಪೃಕೃತಿ ರಮಣೀಯ ಸುಂದರ ಪರಿಸರದಲ್ಲಿರುವ ಮಾಣಿಬೆಟ್ಟು ಶ್ರೀ ದುರ್ಗಾಂಬಿಕಾ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದ್ದು ಪುನರ್‍ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗುತ್ತಿದೆ. ಕ್ಷೇತ್ರದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಸುಮಾರು 85ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀ ಅಮ್ಮನವರ ಗರ್ಭಗುಡಿಯ ನವೀಕರಣ, ಶ್ರೀ ಗುರು ಮತ್ತು ಶ್ರೀ ಆಂಜನೇಯ ಸ್ವಾಮಿಯ ಸಾನಿಧ್ಯ ನಿರ್ಮಾಣ, ಶ್ರೀ ಧೂಮಾವತಿಗೆ ಧರ್ಮ ಚಾವಡಿ ನಿರ್ಮಾಣ, ಭೈರವ ಶಕ್ತಿ ಸಹಿತ ಪರಿವಾರ ದೈವಗಳಿಗೆ ನೂತನ ಗುಡಿ ನಿರ್ಮಾಣ ಕಾರ್ಯ ಪೂರ್ಣ ಹಂತಕ್ಕೆ ತಲುಪುತ್ತಿದ್ದು ಎ.29ರಿಂದ ಮೆ.3ರತನಕ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ವೈಭವಯುತವಾಗಿ ಸಂಪನ್ನಗೊಳ್ಳಲಿದೆ. 
ಎ.29ರಂದು ಅಪರಾಹ್ನ 2ಗಂಟೆಗೆ ಬಿ.ಸಿ.ರೋಡು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಳಿಯಿಂದ ಹಸಿರುವಾಣಿ ಹೊರೆಕಾಣಿಕೆ, ಗುರುಗಳ ಬೆಳ್ಳಿಪಾದ, ಶ್ರೀ ಆಂಜನೇಯ ವಿಗ್ರಹ, ದೈವಗಳ ವಿಗ್ರಹ ಹಾಗೂ ಆಯುಧಗಳ ಶೋಭಾಯಾತ್ರೆ ವೈಭವಯುತವಾಗಿ ನಡೆಯಲಿದೆ. ಸಂಜೆ 6.30ಕ್ಕೆ ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ, ದೈವಜ್ಞರಾದ ಶಶಿಧರನ್ ಮಾಂಗಾಡ್, ಸಚಿವ ಬಿ.ರಮಾನಾಥ ರೈ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸುಂದರ ನಾಯ್ಕ ಮೊದಲಾದವರ ಉಪಸ್ಥಿತಿಯಲ್ಲಿ ಸುಧರ್ಮ ಸಭೆ, ರಾತ್ರಿ ತುಳು ನಾಟಕ ನಡೆಯಲಿದೆ.
ಎ.30ರಂದು ಬೆಳಿಗ್ಗೆ ಭಕ್ತಿ ಭಾವ ಸಂಗಮ, 10.30ಕ್ಕೆ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‍ನ ಸಾಧ್ವಿ ಮಾತಾನಂದಮಯಿ, ಜಿಲ್ಲಾ ಪಂಚಾಯತು ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ದ.ಕ.ಜಿಲ್ಲಾ ಪ.ಪೂ.ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷೆ ಸರಸ್ವತಿ.ಬಿ., ಸಂಸದೆ ಶೋಭಾ ಕರಂದ್ಲಾಜೆ, ಶಾಸಕಿ ಶಕುಂತಳಾ ಶೆಟ್ಟಿ, ಬಾಲಭವನ ಸೊಸೈಟಿ ಮಾಜಿ ಅಧ್ಯಕ್ಷೆ ಸುಲೋಚನಾ ಜಿ.ಕೆ.ಭಟ್ ಮೊದಲಾದವರ ಉಪಸ್ಥಿತಿಯಲ್ಲಿ ಮಾತೃ ಸಮ್ಮಿಲನ, ಮಧ್ಯಾಹ್ನ ತಾಳಮದ್ದಳೆ, ಹರಿಕಥಾ ಸತ್ಸಂಗ, ಸಂಜೆ ಸಾಂಸ್ಕೃತಿಕ ವೈಭವ, ಮಿಮಿಕ್ರಿ, ನೃತ್ಯ ಕಾರ್ಯಕ್ರಮ, ನೃತ್ಯ ವೈಭವ, ಮೆ.1ರಂದು ಬೆಳಿಗ್ಗೆ ಶ್ರೀ ದುರ್ಗಾಂಬಿಕಾ, ಶ್ರೀ ಗುರುವರ್ಯ, ಶ್ರೀ ಆಂಜನೇಯ, ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಬೆಳಿಗ್ಗೆ 11ಕ್ಕೆ ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ, ಪ್ರಗತಿಪರ ಕೃಷಿಕರಾದ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಕೇಂದ್ರ ಸಚಿವ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಮೊದಲಾದವರ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ, ಅಪರಾಹ್ನ ನೃತ್ಯ ವೈಭವ, ಜಾಗೃತಿ ಗೀತೆಗಳ ಗಾಯನ, ಸಂಜೆ 7ಕ್ಕೆ ತುಳು ನಾಟಕ ನಡೆಯಲಿದೆ.
ನಂತರ ದಿನಗಳಲ್ಲಿ ನೇಮೋತ್ಸವ ನಡೆಯಲಿದೆ. ಪ್ರತಿದಿನ ಭಜನೆ, ಅನ್ನಸಂತರ್ಪಣೆ ನಡೆಯಲಿದೆ.
ಹರೀಶ ನಾಯ್ಕ ಆಡಳಿತ ಧರ್ಮದರ್ಶಿ, ಸೋಮಪ್ಪ ನಾಯ್ಕ ಮಂಗಳೂರು ಗೌರವಾಧ್ಯಕ್ಷ, ಮಂಜಪ್ಪ ನಾಯ್ಕ ಮಾಣಿಬೆಟ್ಟು ಅಧ್ಯಕ್ಷ, ಬಾಲಕೃಷ್ಣ ನಾಯ್ಕ ಕೆ.ಬೆಳ್ಳಾರೆ ಕಾರ್ಯಾಧ್ಯಕ್ಷ, ರಾಮಚಂದ್ರ ಕೆಂಬಾರೆ ಪ್ರಧಾನ ಕಾರ್ಯದರ್ಶಿ, ವಾಮನ ನಾಯ್ಕ ಮಾಣಿಬೆಟ್ಟು ಕೋಶಾಧಿಕಾರಿಯಾಗಿರುವ ಸೇವಾ ಸಮಿತಿ, ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು ಗೌರವಾಧ್ಯಕ್ಷ, ಎಂ.ತುಂಗಪ್ಪ ಬಂಗೇರ ಅಧ್ಯಕ್ಷ, ಸಂಜೀವ ಪೂಜಾರಿ ಪಿಲಿಂಗಾಲು ಕಾರ್ಯಾಧ್ಯಕ್ಷ, ಜಯರಾಮ ನಾಯ್ಕ ನಿನ್ಯಾರು ಪ್ರಧಾನ ಕಾರ್ಯದರ್ಶಿ, ಶಶಿಧರ ನಾಯ್ಕ ಮಾಣಿಬೆಟ್ಟು ಕೋಶಾಧಿಕಾರಿಯಾಗಿರುವ ಬ್ರಹ್ಮಕಲಶೋತ್ಸವ ಸಮಿತಿ, ರಾಮಚಂದ್ರ ಶೆಟ್ಟಿ ದಂಡೆ ಗೌರಾವಾಧ್ಯಕ್ಷ, ಸುದರ್ಶನ್ ಜೈನ್ ಅಧ್ಯಕ್ಷ, ರಾಮಕೃಷ್ಣ ದೇವಾಡಿಗ ಕೋಶಾಧಿಕಾರಿ, ಗೋಪಾಲ ಅಂಸನ್ ಸಲಹೆಗಾರರಾಗಿರುವ ಜೀರ್ಣೋಧ್ಧಾರ ಸಮಿತಿ, ಉಪಸಮಿತಿಗಳು, ಅವಿಭಜಿತ ದ.ಕ.ಜಿಲ್ಲೆಯ ಹಲವಾರು ಸಂಘಟನೆಗಳು ಕ್ಷೇತ್ರದ ಪುನರ್‍ನಿರ್ಮಾಣ ಹಾಗೂ ಉತ್ಸವದ ಯಶಸ್ವಿಗಾಗಿ ಶ್ರಮಿಸುತ್ತಿದೆ.
ಕ್ಷೇತ್ರದ ಹಿನ್ನೆಲೆ:
400 ವರ್ಷಗಳ ಹಿಂದೆ ಗುರು ಪರಂಪರೆಯ ಕಾಲ ಘಟ್ಟದಲ್ಲಿ ಆಗಿನ ಶ್ರೇಷ್ಠ ಗುರುಗಳ ತಪೋಶಕ್ತಿಗೆ ಒಲಿದ ಶ್ರೀ ದುರ್ಗಾಂಬಿಕಾ ಅಮ್ಮನವರ ದಿವ್ಯ ಭವ್ಯ ಪಾವನ ನೆಲೆಯೇ ಶ್ರೀ ಮಾಣಿಬೆಟ್ಟು ಕ್ಷೇತ್ರ.
ಕ್ಷೇತ್ರದಲ್ಲಿ ಶ್ರೀ ಅಮ್ಮನವರು, ನಾಗದೇವರು, ರಕ್ತೇಶ್ವರಿ, ಧೂಮವತಿ, ಮೈಷಂದಾಯ, ಕಲ್ಲುರ್ಟಿ, ಕಲ್ಕುಡ, ವರ್ಣರ ಪಂಜುರ್ಲಿ, ಸೂಕತ್ತೆರಿ, ಮೈಯಂತಿ, ಬೈರವ ಹಾಗೂ ಗುಳಿಗ ದೈವಗಳು ನೆಲೆಯಾಗಿ ಭಕ್ತರನ್ನು ಹರಸುತ್ತಿದ್ದಾರೆ. ಊರ ಪರವೂರ ಅಪಾರ ಭಕ್ತಾಧಿಗಳು ಜಾತಿ, ಮತ ಭೇದವಿಲ್ಲದೆ ಕ್ಷೇತ್ರಕ್ಕೆ ಬಂದು ತಮ್ಮ ಕಷ್ಟವನ್ನು ಹೇಳಿ, ಶಕ್ತ್ಯಾನುಸಾರ ಸೇವೆ ಸಲ್ಲಿಸಿ ತಮ್ಮ ಇಷ್ಠಾರ್ಥವನ್ನು ಸಿದ್ಧಿಸಿಕೊಳ್ಳುತ್ತಿದ್ದಾರೆ.
ಶ್ರೀ ಅಂಜನೇಯ ಸ್ವಾಮಿಯು ಶ್ರೀ ದೇವಿಯ ದೂತನಾಗಿ ನೆಲೆ ನಿಂತಿರುವುದು, ಶ್ರೀ ಮಹಾತಾಯಿಯನ್ನು ಪ್ರಾತಃಕಾಲದಲ್ಲಿ ಶ್ರೀ ದುರ್ಗಾಂಬಿಕಾ ರೂಪದಲ್ಲಿ, ಸಂಜೆ ಶ್ರೀ ಮಹಮ್ಮಾಯಿ ರೂಪದಲ್ಲಿಯೂ ಆರಾಧಿಸಿಕೊಂಡು ಬರಬೇಕೆಂದು ಅಮ್ಮನವರ ಅಪ್ಪಣೆಯಾಗಿರುವುದರೊಂದಿಗೆ ಒಂದೇ ಗದ್ದುಗೆಯಲ್ಲಿ ಎರಡು ರೂಪಗಳಲ್ಲಿ ಆರಾದಿಸಲ್ಪಡುವುದು ಈ ಕ್ಷೇತ್ರದ ವಿಶೇಷತೆಯಾಗಿದೆ. ಕ್ಷೇತ್ರದಲ್ಲಿ ದೈವಜ್ಞರಾದ ಶ್ರೀ ಶಶಿಧರನ್ ಮಾಂಗಾಡ್ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಕ್ಷೇತ್ರಕ್ಕೂ, ಶ್ರೀ ಶೃಂಗೇರಿ ಮಠಕ್ಕೂ ಅವಿನಾಭಾವ ಸಂಬಂಧ ಇದೆ, ಶ್ರೀಗುರುಗಳಿಂದ ಆರಾಧಿಸಲ್ಪಡುತ್ತಿದ್ದ ಅಮ್ಮನವರೇ ಈಗಿನ ಮಾಣಿಬೆಟ್ಟಿನಲ್ಲಿ ನೆಲೆನಿಂತ ಶ್ರೀ ದುರ್ಗಾಂಬಿಕಾ ಅಮ್ಮನವರು, ಅದೇ ಗುರುವಿನ ವಂಶಸ್ಥರಿಂದ ವರ್ತಮಾನ ಕಾಲದಲ್ಲಿ ಅಮ್ಮನವರು ಪೂಜಿಸಲ್ಪಟ್ಟು ಭಕ್ತರ ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ ಹಾಗೂ ಕ್ಷೇತ್ರದಲ್ಲಿ ಶ್ರೀ ಗುರುವಿನ ಸಾನಿಧ್ಯವನ್ನೂ ನಿರ್ಮಿಸಬೇಕೆಂದು ಅಪ್ಪಣೆಯಾಗಿರುವುದು ಇಲ್ಲಿನ ಗುರುವಿನ ಮಹಿಮೆಗೆ ಸಾಕ್ಷಿಯಾಗಿದೆ. ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಂತೆ ಇದೀಗ ಕ್ಷೇತ್ರದ ಪುನರ್‍ನಿರ್ಮಾಣ ಕಾರ್ಯ ನಡೆಯುತ್ತಿದೆ. ಗುರು ಪರಂಪರೆಯಂತೆ ಇದೀಗ ಶ್ರೀ ಹರೀಶ ನಾಯ್ಕ ಎಂಬವರು ಕ್ಷೇತ್ರದಲ್ಲಿ ಕಳೆದ ಹಲವಾರು ವರ್ಷಗಳಿಂದ ತನ್ನ ವಿಶೇಷ ಶ್ರದ್ಧಾಭಕ್ತಿಯಿಂದ ಅಮ್ಮನನ್ನು ಆರಾಧಿಸಿಕೊಂಡು ಬರುತ್ತಿದ್ದು, ತಾನು ನೀಡುವ ಪ್ರಸಾದ ಹಾಗೂ ಅಭಯದ ನುಡಿಗಳಿಂದ ಅದೆಷ್ಟೋ ಭಕ್ತರ ಸಂಕಷ್ಟಗಳನ್ನು ದೂರಮಾಡಿ ನೆಮ್ಮದಿಯ ಬದುಕನ್ನು ಕಲ್ಪಿಸಿದ್ದಾರೆ.
ಇತಿಹಾಸದಲ್ಲಿ ವೈಭವದಲ್ಲಿ ಮೆರೆದು ನಂಬಿ ಬಂದ ಭಕ್ತರ ಇಷ್ಠಾರ್ಥ ಸಿದ್ಧಿಸುವ ಪುಣ್ಯ ನೆಲೆಯಾಗಿದ್ದ ಶ್ರೀ ಮಾಣಿಬೆಟ್ಟು ಕ್ಷೇತ್ರ ಮತ್ತೊಮ್ಮೆ ಸರ್ವಾಂಗ ಸುಂದರವಾಗಿ ನೆಲೆ ನಿಂತು ಭಕ್ತರ ಆಕರ್ಷಣೆಯ ಆರಾಧನಾ ಕೇಂದ್ರವಾಗಬೇಕು, ಬದುಕಿನಲ್ಲಿ ನೊಂದು ಬೆಂದು ಬಳಲಿ ಬಂದವರಿಗೆ ಶಾಂತಿ ನೆಮ್ಮದಿ ನೀಡುವ ಶಾಂತಿಧಾಮವಾಗಬೇಕು ಎನ್ನುವುದು ಕ್ಷೇತ್ರದ ಆಡಳಿತ ಮಂಡಳಿಯ ಅಪೇಕ್ಷೆಯಾಗಿದೆ. ಈ ಕ್ಷೇತ್ರವು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಆಧ್ಯಾತ್ಮ, ಧಾರ್ಮಿಕ ಅಭಿವೃದ್ಧಿಯ ಜತೆಗೆ ಸಮಾಜದ ಸಮಗ್ರ ಪ್ರಗತಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವ ಕೇಂದ್ರವಾಗಬೇಕೆನ್ನುವ ನೆಲೆಯಲ್ಲಿ ಯೋಚನೆ-ಯೋಜನೆಗಳನ್ನು ರೂಪಿಸಲಾಗಿದೆ.
ಬಹುತೇಕ ಮಾಹಿತಿ ಆಮಂತ್ರಣ ಪತ್ರದಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಬಿ. ಮಂಜಪ್ಪ ನಾಯ್ಕ ಮಾಣಿಬೆಟ್ಟು
ಅಧ್ಯಕ್ಷರು, ಸೇವಾ ಸಮಿತಿ
9482356739
