ಸುದ್ದಿ9ಮಂಗಳೂರು:ಕಳೆದೊಂದು ವರ್ಷದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ರಾಜ್ಯದಲ್ಲಿ ಅತ್ಯಾಚಾರ, ಮಹಿಳಾ ದೌರ್ಜನ್ಯ, ಕಳ್ಳತನ, ಅಪಹರಣ, ದರೋಡೆ, ಕೊಲೆ, ಅಕ್ರಮ ಮಾದಕ ದ್ರವ್ಯ ಸಾಗಾಟ ಮತ್ತು ಅಕ್ರಮ ಗೋಕಳ್ಳತನ ಜನತೆಯಲ್ಲಿ ಆತಂಕವನ್ನು ಮೂಡಿಸಿದೆ. ದೇಶದಲ್ಲಿಯೇ ಮಹಿಳೆಯರಿಗೆ ಅಸುರಕ್ಷಿತ ನಗರವಾಗಿ ಬೆಂಗಳೂರು ಗುರುತಿಸಲ್ಪಟ್ಟಿದ್ದು, ರಾಜ್ಯದ ಜನತೆಯನ್ನು ಅಭದ್ರತೆ ಕಾಡುತ್ತಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ಸತೀಶ್ ಪ್ರಭು ಕಳವಳ ವ್ಯಕ್ತಪಡಿಸಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯ ರಾಜ್ಯದಲ್ಲಿ ಸಾಮಾನ್ಯವಾಗುತ್ತಿದ್ದು, ಅಪ್ರಾಪ್ತ ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ರಾಜ್ಯದ ಜನತೆಯ ನಿದ್ದೆಗೆಡಿಸಿದೆ. ಹಲವಾರು ಸಂದರ್ಭದಲ್ಲಿ ರಾಜಕಾರಣಿಗಳು ಮತ್ತು ಪೋಲಿಸರು ಅತ್ಯಾಚಾರಿಗಳ, ಅಪರಾಧಿಗಳ ಪರ ವಕಾಲತ್ತು ನಡೆಸುತ್ತಿರುವುದು ಜನತೆಯಲ್ಲಿ ಅಸುರಕ್ಷತೆಯ ಮನೋಭಾವ ಮೂಡಿಸಿದೆ. ಪೋಲಿಸ್ ಇಲಾಖೆಯ ಮೇಲೆ ಗೃಹ ಇಲಾಖೆ ಮತ್ತು ಸರಕಾರ ನಿಯಂತ್ರಣ ಕಳೆದುಕೊಂಡಿದೆ. ಸಚಿವರಲ್ಲಿನ ಸಮನ್ವಯತೆಯ ಕೊರತೆ ಮತ್ತು ಪರಸ್ಪರ ಅಸಹನೆ ರಾಜ್ಯದ ಆಡಳಿತೆಯ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಕೊಂಡಿದೆ. ಸಚಿವರು ಮತ್ತು ಶಾಸಕರು, ಪೋಲಿಸ್ ಇಲಾಖೆಯ ಮೇಲೆ ಒತ್ತಡವನ್ನು ತಂದು ಆರೋಪಿಗಳ ಪರವಾಗಿ ವಕಾಲತ್ತು ನಡೆಸುತ್ತಿರುವುದು ತೀವ್ರ ಕಳವಳವನ್ನುಂಟು ಮಾಡಿದೆ ಎಂದು ಸತೀಶ ಪ್ರಭು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿಯೇ ಕರ್ತವ್ಯ ನಿರತ ಪೋಲಿಸರ ಮೇಲೆ ಶಾಸಕರು ಹಲ್ಲೆ ನಡೆಸಿದರೂ ಪೋಲಿಸ್ ಇಲಾಖೆ ಕೈಕಟ್ಟಿ ಕೊಡುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ದೇರಳಕಟ್ಟೆ ಅತ್ಯಾಚಾರ ಪ್ರಕರಣದಲ್ಲಿ ಪೋಲಿಸರ ಮೇಲೆ ಹಲ್ಲೆ, ಕೊಲೆಯತ್ನ ನಡೆಸಿದ್ದರೂ ಯಾವುದೇ ಪರಿಣಾಮಕಾರೀ ಕ್ರಮ ಕೈಗೊಳ್ಳದಿರುವುದು ಅಪರಾಧಿಗಳಿಗೆ ಕುಕೃತ್ಯ ನಡೆಸಲು ಪ್ರೇರೇಪಿಸಿದೆ. ಸಬ್ ಜೈಲಿನಲ್ಲಿ ಪೋಲಿಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವ ದುಸ್ಸಾಹಸವನ್ನು ಮಾಡಲು ಖೈದಿಗಳಿಗೆ ಉತ್ತೇಜನ ನೀಡಿದೆ. ಪೋಲಿಸ್ ಇಲಾಖೆಯಲ್ಲಿ ಅತಿರೇಕದ ರಾಜಕೀಯ ಕೈವಾಡದಿಂದ ಪೋಲಿಸ್ ಇಲಾಖೆ ಸಂಪೂರ್ಣ ನಿಸ್ಸಹಾಯಕವಾಗಿದ್ದು, ಸ್ವತ: ಪೋಲಿಸರ ಮೇಲೆ ಹಲ್ಲೆ ನಡೆದರೂ ಕೈಕಟ್ಟಿ ನೋಡುವಂತಾಗಿದೆ. ರಾಜ್ಯದ ಗೃಹ ಖಾತೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದೆ. ಕರಾವಳಿಯ ಅವಳಿ ಜಿಲ್ಲೆಗಳಲ್ಲಿ ಇತ್ತೀಚೆಗೆ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದಿಂದ ಮೊದಲ್ಗೊಂಡು ಶಿರೂರಿನ ರತ್ನ ಕೊಠಾರಿ ಅಪಹರಣ, ಕೊಲೆ ಪ್ರಕರಣದವರೆಗೆ ಅನೇಕ ಮಹಿಳೆಯರ ಮತ್ತು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಅಪಹರಣ, ಕೊಲೆ ಘಟನೆಗಳು ನಡೆದಿದ್ದರೂ, ಕಾನೂನು ಕ್ರಮ ಕೈಗೊಂಡು ಜನತೆಯಲ್ಲಿ ಭರವಸೆ ಮತ್ತು ಸುರಕ್ಷತೆಯ ವಾತಾವರಣ ನಿಮರ್ಿಸಬೇಕಾಗಿದ್ದ ಪೋಲಿಸ್ ಇಲಾಖೆ ಅಸಹಾಯಕತೆಯಿಂದ ಕೈಚೆಲ್ಲಿ ಕುಳಿತಿದೆ. ಒಟ್ಟಿನಲ್ಲಿ, ಜನತೆಯಲ್ಲಿ ಸುರಕ್ಷತೆಯ ವಾತಾವರಣವನ್ನು ಮೂಡಿಸುವಲ್ಲಿ ಸಂಪೂರ್ಣ ವಿಫಲರಾಗಿರುವ ರಾಜ್ಯ ಗೃಹ ಸಚಿವರು ತಮ್ಮ ಅಸಮರ್ಥತೆಯನ್ನು ಮನಗಂಡು ರಾಜೀನಾಮೆ ನೀಡಬೇಕು. ರಾಜ್ಯ ಸರಕಾರ ಜನತೆಯಲ್ಲಿ ಭದ್ರತೆಯ, ಸುರಕ್ಷತೆಯ ವಾತಾವರಣವನ್ನು ಉಂಟುಮಾಡುವಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾ ವಕ್ತಾರ ಸತೀಶ್ ಪ್ರಭು ಆಗ್ರಹಿಸಿದ್ದಾರೆ.

 

 

 

 

 

 

 

By suddi9

Leave a Reply

Your email address will not be published. Required fields are marked *