ಲಂಡನ್ನಲ್ಲಿ ಭಾರತೀಯ ಮೂಲದ ಮಹಿಳೆ ಬಂಧನ
ಲಂಡನ್: ಪೂರ್ವ ಲಂಡನ್ನಲ್ಲಿ ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳು ಭಾರತೀಯ ಮೂಲದ ಮಹಿಳೆ ಕುಂತಲ್ ಪಟೇಲ್ ಎಂಬಾಕೆಯನ್ನು ಭಯೋತ್ಪಾದಕ ವಿರೋಧಿ ಕಾನೂನು, ಅಪರಾಧ ಮತ್ತು ಭದ್ರತೆ 2001ರಂತೆ ಬಂಧಿಸಿದ್ದಾರೆ.
ಪೂರ್ವ ಲಂಡನ್ನ ಸ್ಥಳೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶೆಯಾಗಿರುವ ಮೀನಾ ಪಟೇಲ್ ಎಂಬಾಕೆಯ ಮಗಳಾಗಿರುವ ಕುಂತಲ್ ಅದೇ ನಗರದಲ್ಲಿ ಉದ್ಯೋಗದಲ್ಲಿದ್ದರೆ ಆಕೆಯ ಸಹೋದರಿ ಪೂನಂ ವೈದ್ಯೆಯಾಗಿದ್ದಾರೆ. ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳು ಪಟೇಲ್ ನಿವಾಸದ ಪಕ್ಕದ ಮನೆಗೆ ದಾಳಿ ನಡೆಸಿದಾಗ ಆ ಮನೆಯ ಕಂಪ್ಯೂಟರ್ ಜೊತೆ ಕುಂತಲ್ ಪಟೇಲ್ನ ಕಂಪ್ಯೂಟರ್ ಸಂಪರ್ಕ ಹೊಂದಿದ್ದ ಕಾರಣ ಆಕೆಯನ್ನು ವಿಚಾರಣೆಗಾಗಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯವಾಗಿ ಪಟೇಲ್ ಕುಟುಂಬದ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ. ಕಳೆದ ಇಪ್ಪತ್ತು ವರ್ಷಗಳಿಂದ ತಾನು ಈ ಕುಟುಂಬದ ಜೊತೆ ಸಂಪರ್ಕ ಹೊಂದಿರುವುದಾಗಿ ಸ್ಥಳೀಯ ಕೌನ್ಸಿಲರ್ ರೋನ್ ಮ್ಯಾನ್ಲೆ ತಿಳಿಸಿದ್ದಾರೆ. ಇದರ ಜೊತೆಗೆ ಅಧಿಕಾರಿಗಳು ತಪ್ಪು ಗ್ರಹಿಕೆಯಿಂದಾಗಿ ಪಟೇಲ್ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂಬ ವಾದವೂ ಕೇಳಿಬರುತ್ತಿದೆ.
