ವಿಟ್ಲ: ಮಾರುಕಟ್ಟೆಗೆಂದು ಕಾದಿರಿಸಿದ್ದ ಜಮೀನು ಒತ್ತುವರಿಯಾಗಿದ್ದು, ತೆರವು ಮಾಡಿಕೊಡುವಂತೆ ವಿಟ್ಲ ಪಟ್ಟಣ ಪಂಚಾಯಿತಿ ಜಿಲ್ಲಾಡಳಿತಕ್ಕೆ ಕೇಳಿಕೊಂಡ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪುರಸಭಾ ನಿಯಮಾನುಸಾರ ತೆರವಿಗೆ ಆದೇಶಿದ್ದರು. ಇದರಂತೆ ಬಂಟ್ವಾಳ ತಹಸೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದಲ್ಲಿ ಒತ್ತುವರಿ ತೆರವಿಗೆ ಮುಂದಾಗಿದ್ದು, ಒತ್ತುವರಿದಾರರನ್ನು ಬೆಚ್ಚಿ ಬೀಳಿಸುವಂತೆ ಮಾಡಿದ ಘಟನೆ ವಿಟ್ಲ ಬೊಬ್ಬೆಕೇರಿಯಲ್ಲಿ ಮಂಗಳವಾರ ನಡೆಯಿತು.

vil-1

ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂಬರ್ 459/11ಬಿಯಲ್ಲಿ 0.08 ಎಕರೆ ಪಂಚಾಯಿತಿಯ ಮೀನು ಮಾರುಕಟ್ಟೆ ಹೆಸರಿನಲ್ಲಿದೆ. ಸದ್ಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಸುಸಜ್ಜಿತ ಮೀನು ಮಾರುಕಟ್ಟೆ ಸಮುಚ್ಚಯ ನಿರ್ಮಾಣಕ್ಕೆಂದು ಸುಮಾರು 25 ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಿ ಶಿಲಾನ್ಯಾಸವನ್ನೂ ನೆರವೇರಿಸಲಾಗಿತ್ತು. ಹಳೆ ಕಟ್ಟಡದ ಒಂದು ಭಾಗ ತೆರವು ಮಾಡಿ ಅಳತೆ ಮಾಡುವ ಸಮಯದಲ್ಲಿ 3.75 ಸೆಂಟ್ಸ್ ಮಾತ್ರ ಲಭವಾಗಿದ್ದು, ಉಳಿದ 4.25 ಸೆಂಟ್ಸ್ ಒತ್ತುವರಿಯಾಗಿತ್ತು.

ಒತ್ತುವರಿ ತೆರವು ಕಾರ್ಯದ ಬಗ್ಗೆ ಮಾತುಕತೆಗಳು ನಡೆದಿದ್ದು, ಸರ್ವೇ ನಡೆಸುವ ಸಮಯದಲ್ಲಿ ಮಾತುಕತೆ ವಿಫಲವಾಗಿತ್ತು. ಹಳೆ ಕಟ್ಟಡದಲ್ಲಿ ವ್ಯಾಪಾರ ನಡೆಸುತ್ತಿದ್ದ ಮಾರುಕಟ್ಟೆ ಗುತ್ತಿಗೆ ಪಡೆದವರನ್ನು ಕೆಲವು ಸಮಯದಲ್ಲಿ ಹೊಸ ಕಟ್ಟಡ ಕಟ್ಟಿಸಿಕೊಡುವ ಭರವಸೆಯಲ್ಲಿ ಸ್ಥಳದಿಂದ ಎಬ್ಬಿಸಿ ಹಳೆ ಕಟ್ಟಡ ಕೆಡವಲಾಗಿತ್ತು. ಇತ್ತ ಕಟ್ಟಡವೂ ಇಲ್ಲದೆ ಅತ್ತ ಹಣವನ್ನು ಹಿಂದಿರುಗಿಸದೆ ಗುತ್ತಿಗೆದಾರ ಸಂಕಷ್ಟಕೊಳಗಾಗಿದ್ದ. ಈ ಬಗ್ಗೆ ವಿಜಯವಾಣಿ ವಿಸ್ತ್ರುತ ವರದಿ ಪ್ರಕಟಿಸಿ ಪಂಚಾಯಿತಿಯನ್ನು ಎಚ್ಚರಿಸಿತ್ತು.

ಒತ್ತುವರಿ ತೆರವು ಮಾಡಿ ಕಟ್ಟಣ ನಿರ್ಮಾಣಕ್ಕೆ ಮುಂದಾಗುವ ಬಗ್ಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು. ಒತ್ತುವರಿ ತೆರವು ಮಾಡಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಪತ್ರವನ್ನೂ ಬರೆಯಲಾಗಿತ್ತು. ಈ ನಿಟ್ಟಿನಲ್ಲಿ ಮತ್ತೆ ಸರ್ವೇ ಕಾರ್ಯ ನಡೆದು ಸ್ಥಳ ಗುರುತು ಮಾಡಲಾಗಿತ್ತು. ಈ ಸಂದರ್ಭ ಒತ್ತುವರಿಯ ಜಾಗದಲ್ಲಿರುವ ಮನೆಯವರಿಂದ ಸಾಕಷ್ಟು ಆಕ್ಷೇಪಗಳೂ ಕೇಳಿಬಂದಿದ್ದವು. ಮತ್ತೆ ಮಾತುಕತೆಗಳು ನಡೆದರೂ ಜಾಗ ಬಿಟ್ಟುಕೊಡುವ ವಿಚಾರದಲ್ಲಿ ಒತ್ತುವರಿದಾರರು ಮುಂದೆ ಬಾರದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ನಡೆಯಿತು.

ವಿಟ್ಲ ಹೋಬಳಿ ಕಂದಾಯ ನಿರೀಕ್ಷಕರಾದ ದಿವಕರ, ಸಹಾಯಕ ಗಿರೀಶ್, ಗ್ರಾಮ ಕರಣಿಕರಾದ ಪ್ರಕಾಶ್, ಬಂಟ್ವಾಳ ಸರ್ವೇಯರ್ ಮಾದೇಶ, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಅಧ್ಯಕ್ಷ ಅರುಣ ವಿಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್, ಪಟ್ಟಣ ಪಂಚಾಯಿತಿ ಎಂಜಿನಿಯರ್ ಶ್ರೀಧರ, ಕಂದಾಯ ನಿರೀಕ್ಷಕ ಪಕೀರ ಮೂಲ್ಯ, ಪಟ್ಟಣ ಪಂಚಾಯಿತಿ ಸದಸ್ಯರಾದ ಮಂಜುನಾಥ ಕಲ್ಲಕಟ್ಟ, ರಾಮ್ ದಾಸ್ ಶೆಣೈ, ಲೋಕನಾಥ್ ಮತ್ತಿತರರು ಹಾಜರಿದ್ದರು. ವಿಟ್ಲ ಪೆÇಲೀಸ್ ಠಾಣಾ ಉಪನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ಬಂದೋಬಸ್ತು ಕಲ್ಪಿಸಲಾಗಿತ್ತು.

ಕರ್ತವ್ಯಕ್ಕೆ ಅಡ್ಡಿ:
ಒತ್ತುವರಿ ತೆರವು ಕಾರ್ಯ ಆರಂಭವಾಗುತ್ತಿದ್ದಂತೆ ಒತ್ತುವರಿ ಸ್ಥಳದಲ್ಲಿ ವಾಸವಾಗಿರುವ ಜಲಾಲುದ್ದೀನ್, ಮಹಮ್ಮದ್ ಬ್ಯಾರಿ ತೆರವು ವಾಹನಕ್ಕೆ ಅಡ್ಡಿ ಪಡಿಸಿದರು. ತಹಸೀಲ್ದಾರ್ ಪುರಂದರ ಹೆಗ್ಡೆ ಅವರು ಹಲವು ಬಾರಿ ಒತ್ತುವರಿ ಮಾಡಿರುವ ಬಗ್ಗೆ ತಿಳಿಸಿದ್ದರೂ ಸೂಕ್ತ ಕ್ರಮಕ್ಕೆ ಮುಂದಾಗದಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ತೆರವು ಮಾಡಲಾಗುತ್ತಿದೆ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸಿದರು. ಆದರೂ ವಾಹನವನ್ನು ಮುಂದೆ ಹೋಗಲು ಬಿಡದಿದ್ದಾಗ ಪೆÇಲೀಸರು ಅವರನ್ನು ಸ್ಥಳದಿಂದ ಕರೆದೊಯ್ದರು.

ಪಟ್ಟಣ ಪಂಚಾಯಿತಿಯಿಂದ ದೂರು:
ಒತ್ತುವರಿ ತೆರವು ಕಾರ್ಯದ ಸಂದರ್ಭ ಇಲಾಖಾಧಿಗಳಲ್ಲಿ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿ ಪಡೆಸಿದ ಹಿನ್ನಲೆಯಲ್ಲಿ ಪಟ್ಟಣ ಪಂಚಾಯಿತಿ ವಿಟ್ಲ ಠಾಣೆಗೆ 4 ಮಂದಿಯ ಮೇಲೆ ದೂರು ನೀಡಿದೆ. ಜಾಗದಲ್ಲಿ ವಾಸವಾಗಿರುವ ಜಲಾಲುದ್ದೀನ್, ಮಹಮ್ಮದ್ ಬ್ಯಾರಿ, ಸ್ಥಳೀಯರಾದ ಬಶೀರ್, ಶಮೀರ್ ಎಂಬವರು ಕರ್ತವ್ಯಕ್ಕೆ ಅಡ್ಡಿ ಪಡಿಸಿ ತೆರವು ಕಾರ್ಯಕ್ಕೆ ತೊಂದರೆ ನೀಡಿದ ಹಿನ್ನಲೆಯಲ್ಲಿ ಅವರ ಮೇಲೆ ದೂರು ನೀಡಲಾಗಿದೆ.

ಸ್ಥಳದಲ್ಲಿ ಹೈಡ್ರಾಮಾ:
ಕಾರ್ಯಾಚರಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಮಹಮ್ಮದ್ ಬ್ಯಾರಿ ಎಂಬವರು ಒತ್ತುವರಿ ಜಾಗದಲ್ಲಿರುವ ಕಾಂಪೌಂಡ್ ಮೇಳೆ ಏರಿ ಕುಳಿತ ಯಂತ್ರಕ್ಕೆ ಕೆಲಸ ಮಾಡದಂತೆ ಅಡ್ಡಿ ಪಡಿಸಿದರು. ಇವರನ್ನು ಅಲ್ಲಿಂದ ಏಳಿಸಲು ಹೋದ ವಿಟ್ಲ ಪೆÇಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ರುಕ್ಮಯ ಮೂಲ್ಯ ಅವರ ಕೈಗೆ ಕಚ್ಚಿ ಗಾಯ ಗೊಳಿಸಿದ್ದು ಅಲ್ಲದೆ ಪರಚಾಡಿದ್ದಾರೆ. ಬಳಿಕ ತಮಗೆ ಗಾಯವಾಗಿದೆ ಎಂದು ಆಸ್ಪತ್ರೆಯಲ್ಲಿ ಹೋಗಿ ಮಲಗಿದ್ದಾರೆ. ಇವರಿಗೆ ಕೆಲವು ಸ್ಥಳೀಯ ರಾಜಕೀಯ ವ್ಯಕ್ತಿಗಳು ಸಾಥ್ ನೀಡಿ ಅಧಿಕಾರಿಗಳ ಮೇಲೆ ಒತ್ತಡ ತರುವ ಪ್ರಯತ್ನ ಮಾಡುವ ಮೂಲಕ ಹೈಡ್ರಾಮಾ ನಡೆಸಲು ಯತ್ನಿಸಿದರು.

ದಾಖಲೆ ಇಲ್ಲದ ಜಾಗ!
30 ವರ್ಷದ ಹಿಂದೆ ಮಾರುಕಟ್ಟೆ ಕಾರ್ಮಿಕರೊಬ್ಬರು ಹಿಂದೆ ತಾತ್ಕಾಲಿಕ ಶೆಡ್ಡಿ ಹಾಕಿ ವಾಸ್ತವ್ಯ ಮಾಡಿದ್ದು, ಬಳಿಕ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಹೊಸದಾಗಿ ಬಂದವರು ಮೀನು ಮಾರುಕಟ್ಟೆಯ ಹಳೆಯ ಕಟ್ಟಡದ ಹಿಂದಿನವರೆಗೆ ಆವರಣ ಗೋಡೆ ರಚಿಸಿದ್ದರು. ಈ ಬಗ್ಗೆ ಸರ್ವೇ ಕಾರ್ಯಗಳು ನಡೆದಿದ್ದು, ರಾಜಕೀಯ ಒತ್ತಡದಿಂದ ಜಾಗ ತಕರಾರು ಉಲ್ಬಣವಾಗಿತ್ತು. ಹಾಗೆಂದು ಈ ಒತ್ತುವರಿಯಾದ ಸ್ಥಳಕ್ಕೆ ಯಾವುದೇ ದಾಖಲೆಗಳಿಲ್ಲ ಎನ್ನಲಾಗಿದೆ. ಮರಿಯಮ್ಮ ಎಂಬವರ ಹೆಸರಿನಲ್ಲಿ ಪಟ್ಟಣ ಪಂಚಾಯಿತಿಗೆ ಒತ್ತುವರಿ ತೆರವು ಕಾರ್ಯದ ಬಗ್ಗೆ ಆಕ್ಷೇಪ ನೀಡಲಾಗಿತ್ತಾದರೂ, ಸರ್ವಾನುಮತದಿಂದ ಒತ್ತುವರಿ ತೆರವಿಗೆ ನಿರ್ಣಯಿಸಲಾಗಿತ್ತು.

By suddi9

Leave a Reply

Your email address will not be published. Required fields are marked *