ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಒಂಟಿಕಟ್ಟೆಯ ಸ. ಹಿ. ಪ್ರಾ. ಶಾಲಾ ನೂತನ ಸಭಾಭವನವನ್ನು ಶನಿವಾರ ನಡೆದ ಶಾಲೆಯ 26ನೇ ವಾರ್ಷಿಕೋತ್ಸವ ಸಂದರ್ಭ ಕ್ಷೇತ್ರ ಶಾಸಕ ಕೆ. ಅಭಯಚಂದ್ರ ಅವರು ಉದ್ಘಾಟಿಸಿದರು.
ಎಸ್.ಡಿ.ಎಂ.ಸಿ. ಅಧ್ಯಕ್ಷೆ ಭವಾನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ, ವಾರ್ಡ್ ಸದಸ್ಯ ಕೊರಗಪ್ಪ, ಪುರಸಭಾ ಸದಸ್ಯ ನಾಗರಾಜ ಪೂಜಾರಿ, ಮೂಡಬಿದಿರೆಯ ಸ.ಪ್ರಾ. ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್ ಎಸ್., ಪುರಸಭಾ ಮಾಜಿ ಅಧ್ಯಕ್ಷ ಭೋಜ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಶೈಕ್ಷಣಿಕವಾಗಿ ಪ್ರತಿಭಾನ್ವಿತರಾದವರೇ ಸರಕಾರಿ ಶಾಲೆಗಳ ಶಿಕ್ಷಕರಾಗುವುದರಿಂದ ಸರಕಾರಿ ಶಾಲೆಯಲ್ಲಿ ಓದುವ ಬಗ್ಗೆ ಯಾರೂ ಕೀಳರಿಮೆ ಬೆಳೆಸಿಕೊಳ್ಳಬೇಕಾಗಿಲ್ಲ ಎಂದ ಅಭಯಚಂದ್ರ ಅವರು ಒಂಟಿಕಟ್ಟೆಯಲ್ಲಿ ಐದು ಸೆಂಟ್ಸ್ ಕಾಲನಿ ನಿರ್ಮಾಣಕ್ಕೆ ಮನಸ್ಸು ಮಾಡಿದ ಅಂದಿನ ಪುರಸಭಾಧ್ಯಕ್ಷ ನಾರಾಯಣ ದೇವಾಡಿಗರನ್ನು ಸ್ಮರಿಸಿಕೊಂಡರು.
ಭೋಜ ಕೋಟ್ಯಾನ್ ಅವರು ಶಾಲಾ ಸ್ಥಾಪನೆಯಲ್ಲಿ 1990ರಲ್ಲಿ ತಾವು ಪಟ್ಟ ಶ್ರಮ, ಸಚಿವರಾಗಿದ್ದ ವೀರಪ್ಪ ಮೊೈಲಿಯವರ ಸಹಕಾರವನ್ನು ಸ್ಮರಿಸಿಕೊಂಡು, `ಕನ್ನಡವನ್ನು ಉಳಿಸಿಕೊಂಡು , ಇಂದಿನ ಅಗತ್ಯಕ್ಕಾಗಿ ಇಂಗ್ಲೀಷ್ ಕಲಿಯಬೇಕಾಗಿದೆ’ ಎಂದರು.
ಸರಕಾರಿ ಅನುದಾನ ರೂ.3.5 ಲಕ್ಷ ಸೇರಿದಂತೆ ದಾನಿಗಳ ನೆರವಿನಿಂದ ಒಟ್ಟು ರೂ. 7 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಸಭಾಂಗಣ ರಚನೆಯಲ್ಲಿ ಸಹಕರಿಸಿದವರನ್ನು ಶಾಸಕರು ಗೌರವಿಸಿದರು. ಮುಖ್ಯ ಶಿಕ್ಷಕಿ ಎಲ್ವೀರಾ ಜೆ. ಪಿಂಟೋ ಸ್ವಾಗತಿಸಿದರು. ಶಿಕ್ಷಕ ಕರುಣ ಪಂಗಡಗಾರ ವಾರ್ಷಿಕ ವರದಿ ವಾಚಿಸಿದರು. ರೂಪಲಕ್ಷ್ಮಿ ನಿರೂಪಿಸಿದರು.

