ಬೆಂಗಳೂರು: ರಾಜ್ಯದ್ಯಾಂತ ತೀವ್ರ ಕೂತೂಹಲ ಕೆರಳಿಸಿದ್ದ ಐಎಎಸ್​ ಅಧಿಕಾರಿ ಡಿಕೆ ರವಿ ಅವರ ನಿಗೂಢ ಸಾವಿನ ತನಿಖೆ ಪೂರ್ಣಗೊಂಡಿದೆ. 20 ತಿಂಗಳು ಸುದೀರ್ಘ ತನಿಖೆ ನಡೆಸಿದ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದಾರೆ.

dk-ravi

ಮಾರ್ಚ್​ 16, 2015 ರಂದು ಮಡಿವಾಳದ ಅಪಾರ್ಟ್​ಮೆಂಟ್​ನಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತರಾಗಿದ್ದ ಐಎಎಸ್​ ಅಧಿಕಾರಿ ಡಿಕೆ ರವಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಸಾಕಷ್ಟು ಹೋರಾಟದ ಬಳಿಕ ಸರ್ಕಾರ ಸಿಬಿಐ ಹೆಗಲಿಗೆ ತನಿಖೆಯ ಹೊಣೆ ಹೊರಿಸಿತ್ತು. ಸುಮಾರು 20 ತಿಂಗಳ ತನಿಖೆ ಬಳಿಕ ಇಂದು ಸಿಬಿಐ ಸರ್ಕಾರಕ್ಕೆ ವರದಿ ಕೊಡಲಿದೆ.

– 90 ಪುಟಗಳ ಸಿಬಿಐ ವರದಿ ರೆಡಿ
– 100 ಮಂದಿಯ ತೀವ್ರ ವಿಚಾರಣೆ
– ಆತ್ಮಹತ್ಯೆಯಿಂದಲೇ ಡಿಕೆ ರವಿ ಸಾವು
– ವೈಯುಕ್ತಿಕ ಕಾರಣವೇ ಸಾವಿಗೆ ಕಾರಣ
– ರವಿ ಸಾವಿನಲ್ಲಿ ಬೇರೆಯವರ ಕೈವಾಡವಿಲ್ಲ

ಸಿಬಿಐ ಸುಮಾರು 100 ಕ್ಕೂ ಹೆಚ್ಚು ಮಂದೀನ ವಿಚಾರಣೆಗೊಳಿಸಿತ್ತು. ಅಂತಿಮವಾಗಿ ತನ್ನ ವರದಿಯನ್ನ ಸಿದ್ದಪಡಿಸಿದೆ. 90 ಪುಟಗಳ ವರದಿಯನ್ನ ದಕ್ಷಿಣ ವಿಭಾಗದ ಎಸಿ, ಡಿಬಿ ನಟೇಶ್​ ಅವರಿಗೆ ಸಲ್ಲಿಸಲಿದೆ. ಇದರಲ್ಲಿ ಆತ್ಮಹತ್ಯೆಯಿಂದಲೇ ಡಿಕೆ ರವಿ ಸಾವು ಸಂಭವಿಸಿದ್ದು ವೈಯುಕ್ತಿಕ ಕಾರಣವೇ ರವಿ ಸಾವಿಗೆ ಕಾರಣ ಅಂತ ಹೇಳಲಾಗಿದೆ. ಅಲ್ಲದೆ ಡಿಕೆ ರವಿ ಸಾವಿನಲ್ಲಿ ಬೇರೆಯವರ ಕೈವಾಡವಿಲ್ಲ ಅನ್ನೋದನ್ನೂ ಸಿಬಿಐ ಉಲ್ಲೇಖಿಸಿದೆ ಅಂತ ಹೇಳಲಾಗ್ತಿದೆ.

ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಿಆರ್​ಪಿಸಿ 174 ರ ಅಡಿ ದೂರು ದಾಖಲಿಸಿಕೊಂಡಿದ್ದ, ಪೊಲೀಸರು ತನಿಖೆ ನಡೆಸಿದ್ದರು. ಆರಂಭದಲ್ಲಿಯೇ ಇದೊಂದು ಆತ್ಮಹತ್ಯೆ ಅನ್ನೋ ಹೇಳಿಕೆಗಳು ಸರ್ಕಾರದಿಂದ ಪ್ರಸ್ತಾಪವಾದಾಗ ವಿಪಕ್ಷಗಳು ಸದನದಲ್ಲಿ ಸಿಬಿಐಗೆ ವಹಿಸಲು ಒತ್ತಾಯ ಮಾಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ, ಡಿಕೆ ರವಿ ಪ್ರಕರಣವನ್ನ ಮಾರ್ಚ್​ 23 ರಂದು ಸಿಬಿಐಗೆ ವಹಿಸಿತ್ತು.

ಐಎಎಸ್ ಅಧಿಕಾರಿ ಡಿಕೆ ರವಿ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಿ ರಿಪೋರ್ಟ್ ಸಲ್ಲಿಸುತ್ತಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ರಾಜಕೀಯ ಪಕ್ಷಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಪ್ರತಿಕ್ರಿಯೆಗಳನ್ನು ನೀಡಿದ್ದು ಆರೋಪ ಪ್ರತ್ಯಾರೋಪ ಮುಂದುವರಿದಿದೆ.

ಸತ್ಯ ಗೊತ್ತಾಗಿದೆ: ಬಿಜೆಪಿಯವರು ರಾಜ್ಯ ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದ್ದರು. ಅವರ ಸುಳ್ಳು ಆರೋಪದಿಂದಾಗಿ ನಾವು ಪ್ರಕರಣವನ್ನು ಸಿಬಿಐಗೆ ನೀಡಿದ್ದೇವು. ಈಗ ಈಗ ಸತ್ಯ ಗೊತ್ತಾಗಿದೆ. ಸಿಬಿಐ ಯಾರ ಕೈಯಲ್ಲಿ ಇರೋದು? ಸಾಕ್ಷಿ ನಾಶ ಹೇಗೆ ಆಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ರವಿಯಂತಹ ವ್ಯಕ್ತಿ ಹುಟ್ಟಲ್ಲ: ಇಂಧನ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಡಿಕೆ ರವಿಯಂತಹ ವ್ಯಕ್ತಿ ಮತ್ತೆ ಹುಟ್ಟಿ ಬರಲ್ಲ. ಆದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು. ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದು, ಈಗ ಸಿಬಿಐ ಅಂತಿಮ ವರದಿ ನೀಡಿದೆ. ಇದರಲ್ಲಿ ನಮ್ಮ ಪಾತ್ರ ಏನಿರುತ್ತೆ ಎಂದು ಕೇಳಿದ್ದಾರೆ.

ಪರಿಶೀಲಿಸಿ ಪ್ರತಿಕ್ರಿಯೆ: ಸಿಬಿಐ ವರದಿಯ ಬಗ್ಗೆ ನನಗೆ ಮಾಹಿತಿ ಇಲ್ಲ. ಇಡೀ ದಿನ ನಾನು ಸದನದಲ್ಲಿ ಇದ್ದೆ. ವರದಿಯನ್ನು ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ. ಸಾವಿನಲ್ಲಿ ರಾಜಕಾರಣ ಬೆರೆಸಲಾದ ಕಾರಣ ಪ್ರಕರಣವನ್ನು ಕೇಂದ್ರದ ವ್ಯಾಪ್ತಿಯಲ್ಲಿರುವ ಸಿಬಿಐಗೆ ನೀಡಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

ವಿಳಂಬ ಮಾಡಿದ್ದು ಯಾಕೆ: ವಿಧಾನ ಸಭೆಯ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿ, ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ವಿಚಾರ ಮೊದಲೇ ತಿಳಿದಿದ್ದರೆ ಈ ಪ್ರಕರಣವನ್ನು ಮೊದಲೇ ಸಿಬಿಐಗೆ ಕೊಡಬೇಕಿತ್ತು. ಆಗ ಸತ್ಯ ಏನು ಎನ್ನುವುದು ತಿಳಿಯುತಿತ್ತು. ವಿಳಂಬ ಮಾಡಿದ ಕಾರಣ ಸಾಕ್ಷಾಧಾರ ಸಂಗ್ರಹ, ಮರಣೋತ್ತರ ಪರೀಕ್ಷೆಯಲ್ಲಿ ಅನುಮಾನಗಳಿವೆ. ಆತ್ಮಹತ್ಯೆ ಆಗಿದ್ದರೆ ಮೊದಲೇ ಸಿಬಿಐಗೆ ನೀಡಲು ರಾಜ್ಯ ಸರ್ಕಾರ ವಿಳಂಬ ಮಾಡಿದ್ದು ಯಾಕೆ ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

By suddi9

Leave a Reply

Your email address will not be published. Required fields are marked *