ವಿಟ್ಲ: ಸೇವೆಯೇ ಸಂಘ ಸಂಸ್ಥೆಗಳ ಜೀವಾಳವಾಗಿರಬೇಕು. ಅದು ತನ್ನ ಬೆಳವಣಿಗೆಯಲ್ಲಿಯೇ ತನ್ನ ಪರಿಸರದ ಏಳಿಗೆಗೆ ಕಾರಣವಾಗಿರುತ್ತದೆ. ಶೈಕ್ಷಣಿಕ ಕ್ರಾಂತಿಯ ಜೊತೆಗೆ ಇಂದು ಸರಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ತುಲಾನಾತ್ಮಕ ಸಂಘರ್ಷಗಳು ನಡೆಯುತ್ತಲೇ ಇವೆ. ಆದರೂ ಸಂಘ ಸಂಸ್ಥೆಗಳ ಹಾಗೂ ಪರಿಸರದ ಸಹಕಾರದಿಂದ ಇಂದು ಸರ್ಕಾರಿ ಶಾಲೆಗಳೂ ಉತ್ತಮ ರೀತಿಯಲ್ಲಿ ಬೆಳೆಯುತ್ತಿವೆ ಎಂದು ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಅಧ್ಯಕ್ಷರಾದ ಸಂತೋಷ್ ಡಿಸೋಜರವರು ಲಯನ್ಸ್ ಕ್ಲಬ್ ಮತ್ತು ಎಸ್.ಕೆ.ಪಿ.ಎ ಇದರ ಸಹಯೋಗದಲ್ಲಿ ದ.ಕ.ಜಿ.ಪಂ.ಸ.ಹಿ.ಪ್ರಾ ಶಾಲೆ ಮಜಿ ವೀರಕಂಭ ಇಲ್ಲಿ ನಡೆಸಲಾದ ಕನ್ನಡ ರಾಜ್ಯೋತ್ಸವ ಹಾಗೂ ನಲಿಕಲಿ ತರಗತಿಗಳಿಗೆ ಮ್ಯಾಟ್ ವಿತರಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಸ್ಥಾನ ವಹಿಸಿ ಮಾತನಾಡಿದರು.
ಲಯನ್ಸ್ ಕ್ಲಬ್ ಕೊಳ್ನಾಡು ಸಾಲೆತ್ತೂರು ಇದರ ಕಾರ್ಯದರ್ಶಿಯವರಾದ ಬಾಲಕೃಷ್ಣ ಸೆರ್ಕಳರವರು ಶಾಲೆಯ ಏಳಿಗೆಯು ಊರವರ ನಿರಂತರ ಸಂಪರ್ಕದಿಂದ ಸಾಧ್ಯವಾಗುತ್ತದೆ. ಅಬಿವೃದ್ಧಿಯ ಜೋಡಣೆಗೆ ಇದೊಂದು ಕೊಂಡಿ, ಕೇವಲ ಸಂಘ ಸಂಸ್ಥೆಗಳಲ್ಲದೇ ಶಿಕ್ಷಕರ ಸಹಭಾಗಿತ್ವವು ಉತ್ತಮವಾಗಿದ್ದಾಗ ಎಲ್ಲವೂ ಅಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿ ಬೆಳೆಯಲು ಸಾಧ್ಯವೆಂದು ತಿಳಿಸಿದರು.
ಯಾವುದೇ ಸಂಘಟನೆಗಳು ಸಮಾಜ ಮುಖಿ ಕೆಲಸದಲ್ಲಿ ಸಂತೋಷ ತೃಪ್ತಿಯನ್ನು ಕಾಣುತ್ತವೆ. ನನ್ನ ಪರಿಸರಕ್ಕೆ ನನ್ನಿಂದಾಗುವ ಕಿಂಚಿತ್ತು ಸಹಾಯದಲ್ಲಿ ನನ್ನ ಪಾತ್ರ ಹೀಗಿರಲಿ ಎಂದು ಯೋಚಿಸಿದಾಗ ಎಲ್ಲವೂ ಸಾಧ್ಯವಾಗುತ್ತದೆ ಎಂದು ಎಸ್.ಕೆ.ಪಿ.ಎನ ಕಲ್ಲಡ್ಕ ವಲಯದ ವಲಯ ಪ್ರತಿನಿಧಿ ರೋಶನ್ ರವರು ತಿಳಿಸಿದರು.
ಮುಖ್ಯ ಶಿಕ್ಷಕರು ನಾರಾಯಣ ಪೂಜಾರಿಯವರು ಸ್ವಾಗತಿಸಿ ಶಿಕ್ಷಕಿ ಶಕುಂತಳಾ ಧನ್ಯವಾದವಿತ್ತರು, ಶಿಕ್ಷಕಿ ಸಂಗೀತಾ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಕೆ.ಪಿ.ಎ ನ ಸಂಘಟನಾ ಕಾರ್ಯದರ್ಶಿ ಚಿನ್ನಾ ಮೈರಾ , ಶಿಕ್ಷಕಿ ಸಿಸಿಲಿಯಾ ಹಾಗೂ ಜ್ಯೋತಿ ಸಹಕರಿಸಿದರು.

