ಬೆಂಗಳೂರು: ಇದೇ ಮೊದಲ ಬಾರಿಗೆ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಒಟ್ಟಾಗಿ ಅಭಿನಯಿಸಿರುವುದು ‘ಮುಕುಂದ ಮುರಾರಿ’ ಚಿತ್ರ ಅ.28 ರಾಜ್ಯಾದ್ಯಂತ ತೆರೆಕಾಣುತ್ತಿದೆ. ಇವರಿಬ್ಬರಿಗೂ ಅವರದ್ದೇ ಆದ ಇಮೇಜ್ ಹಾಗೂ ಅಭಿಮಾನಿ ಬಳಗ ಇದೆ. ಇವರಿಬ್ಬರು ಸ್ಯಾಂಡಲ್ ವುಡ್ ನ ಸೂಪರ್ ಸ್ಟಾರ್ ಗಳು ಎನ್ನುವುದಕ್ಕಿಂತ, ದಕ್ಷಿಣ ಭಾರತದ ಸ್ಟಾರ್ ನಟರು ಎನ್ನುವುದು ‘ಮುಕುಂದ ಮುರಾರಿ’ ಬಗ್ಗೆ ಹೆಚ್ಚು ಹೈಪ್ ಕ್ರಿಯೇಟ್ ಆಗಲು ಕಾರಣ. ಒಮ್ಮೆಲೆ, ಇಬ್ಬರು ಸೂಪರ್ ಸ್ಟಾರ್ ಗಳನ್ನ ಒಂದೇ ತೆರೆಯಲ್ಲಿ ನೋಡುವುದು ಅಭಿಮಾನಿಗಳಿಗೆ ಡಬಲ್ ಧಮಾಕಾ. ಚಿತ್ರದ ಫಸ್ಟ್ ಲುಕ್ ನಿಂದ ಹಿಡಿದು ಇಲ್ಲಿಯವರೆಗೂ ಹಲವು ವಿಚಾರಗಳಲ್ಲಿ ಕುತೂಹಲ ಹುಟ್ಟು ಹಾಕಿರುವ ಈ ಬಹುಕೋಟಿ ಚಿತ್ರದ ರಿಸಲ್ಟ್ ಇಂದು ಬಹಿರಂಗವಾಗಲಿದೆ.
ಹ್ಯಾಟ್ರಿಕ್ ಡೈರೆಕ್ಟರ್ ನಂದಕಿಶೋರ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುದೀಪ್-ಉಪೇಂದ್ರ ಜೊತೆಯಲ್ಲಿ ರವಿಶಂಕರ್, ಅವಿನಾಶ್, ನಿಖಿತಾ ತುಕ್ರಾಲ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಆಸ್ತಿಕ ಹಾಗೂ ನಾಸ್ತಿಕ ಎಂಬ ಪರಿಕಲ್ಪನೆ ಹೊಂದಿರುವ ಕಥೆಯೇ ‘ಮುಕುಂದ ಮುರಾರಿ’ ಚಿತ್ರ. ಇದರಲ್ಲಿ ಉಪೇಂದ್ರ ನಾಸ್ತಿಕನ ಪಾತ್ರ ಮಾಡಿದ್ದಾರೆ. ‘ಎ’ ಚಿತ್ರದಲ್ಲಿ ಉಪ್ಪಿ ಗಣೇಶನ ವಿಗ್ರಹವನ್ನ ತೆಗೆದುಕೊಂಡು ಹೋಗಿ ಬಾವಿಗೆ ಹಾಕಿದ್ದು ನೆನಪಿದೆ ಅಲ್ವಾ? ಮೊದಲಿಂದಲೂ ‘ಐ ಆಮ್ ಗಾಡ್, ಗಾಡ್ ಈಸ್ ಗ್ರೇಟ್’ ಎನ್ನುತ್ತಲೇ ಬಂದಿರುವ ಉಪೇಂದ್ರ, ಈ ಚಿತ್ರದಲ್ಲೂ ನಾಸ್ತಿಕನ ಪಾತ್ರ ಮಾಡಿದ್ದಾರೆ. ‘ಎ’ ಚಿತ್ರದಲ್ಲಿನ ಉಪ್ಪಿ ನಿಮಗೆ ಇಷ್ಟವಾಗಿದ್ದರೆ, ಇದರಲ್ಲೂ ಮೆಚ್ಚುಗೆ ಆಗುವುದರಲ್ಲಿ ಅನುಮಾನ ಬೇಡ.
ಇದುವರೆಗೂ ಸುದೀಪ್ ರನ್ನ ಪೊಲೀಸ್ ಆಫೀಸರ್ ಆಗಿ, ಲವರ್ ಬಾಯ್ ಆಗಿ, ರೌಡಿಯಾಗಿ, ಎಲ್ಲಾ ತರಹದ ಪಾತ್ರಗಳಲ್ಲೂ ನೋಡಿದ್ದೀರಿ. ಆದ್ರೆ, ಇದೇ ಮೊದಲ ಬಾರಿಗೆ ದೇವರ ಪಾತ್ರದಲ್ಲಿ, ಶ್ರೀ ಕೃಷ್ಣನಾಗಿ ಸುದೀಪ್ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.
‘ಮುಕುಂದ ಮುರಾರಿ‘ ಚಿತ್ರದ ಮತ್ತೊಂದು ಹೈಲೈಟ್ ಅಂದ್ರೆ ಅದು ನಿರ್ದೇಶಕ ನಂದಕಿಶೋರ್. ‘ವಿಕ್ಟರಿ’, ‘ಅಧ್ಯಕ್ಷ’, ‘ರನ್ನ’… ಹೀಗೆ ನಂದಕಿಶೋರ್ ಆಕ್ಷನ್ ಕಟ್ ಹೇಳಿದ ಎಲ್ಲಾ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ಹೀಗಾಗಿ, ಈ ಚಿತ್ರವೂ ನಂದಕಿಶೋರ್ ಗೆ ಗೆಲುವು ತಂದುಕೊಡುತ್ತೆ ಎನ್ನುವ ನಂಬಿಕೆ ಗಾಂಧಿನಗರದಲ್ಲಿದೆ.
ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ‘ಮುಕುಂದ ಮುರಾರಿ’ಯ ದರ್ಶನವಾಗಲಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಮಾಡಿ, ಫಸ್ಟ್ ಡೇ, ಫಸ್ಟ್ ಶೋ ಕಣ್ತುಂಬಿಕೊಳ್ಳಬೇಕು ಅಂತ ಕಿಚ್ಚ ಹಾಗೂ ಉಪ್ಪಿಯ ‘ಭಕ್ತ’ರು ಕಾಯುತ್ತಿದ್ದಾರೆ.

