ಮಂಗಳೂರು: ಆಯುಷ್ ಇಲಾಖೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣಾ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಅ.28 ಶುಕ್ರವಾರದಂದು ಜರಗಲಿದೆ.
ಅರಣ್ಯ ಸಚಿವ ಬಿ.ರಮಾನಾಥ ರೈ ಕಾರ್ಯಕ್ರಮ ಉದ್ಘಾಟಿಸಲಿರುವರು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸಚೇತಕ ಐವನ್ ಡಿ’ಸೋಜ ಆಗಮಿಸಲಿರುವರು.
ಬೆಳಿಗ್ಗೆ 9ರಿಂದ 1ರವರೆಗೆ ದ.ಕ.ಜಿಲ್ಲೆಯ ಎಲ್ಲಾ ಸರಕಾರಿ ಆಯುರ್ವೆದ ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಸಾರ್ವಜನಿಕ ಆಸ್ಪತ್ರೆಗಳ ಆಯುಷ್ ಘಟಕ, ಖಾಸಗಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಗಳು, ಖಾಸಗಿ ನೊಂದಾಯಿತ ಆಯುರ್ವೇದ ಆಸ್ಪತ್ರೆಗಳು, ಚಿಕಿತ್ಸಾಲಯಗಳಲ್ಲಿ “ ಸಾರ್ವಜನಿಕರಿಗೆ ಉಚಿತ ಮಧುಮೇಹ ತಪಾಸಣೆ ಮತ್ತು ಚಿಕಿತ್ಸಾ ಸಲಹೆಗಳನ್ನು” ಏರ್ಪಡಿಸಲಾಗಿದೆ.
ಮಧ್ಯಾಹ್ನ 3ರಿಂದ ಬಂಟ್ಸ್ ಹಾಸ್ಟಲ್ ನ ಆವರಣದಿಂದ ಪುರಭವನದವರೆಗೆ ಆಯುರ್ವೇದ ವೈದ್ಯಕೀಯ ವಿದ್ಯಾಥಿಗಳು ಹಾಗೂ ವೃತ್ತಿಪರ ವೈದ್ಯರಿಂದ “ಆಯುರ್ವೇದ ಜನಜಾಗೃತಿ ಜಾಥಾ” ಸಚಿವ ಯು.ಟಿ ಖಾದರ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ 4.30ರಿಂದ ಮಂಗಳೂರಿನ ಪುರಭವನದಲ್ಲಿ ಸಾರ್ವಜನಿಕ ಸಮಾರಂಭ ಜರಗಲಿದೆ.

