ಮಂಗಳೂರು: ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಹಿರಿಯ ನಾಗರಿಕರ ಸಮಗ್ರ ಆರೋಗ್ಯ ಸೇವಾ ಸೌಲಭ್ಯವನ್ನು ಅ. 1ರಂದು ಉದ್ಘಾಟಿಸಲಾಯಿತು.

ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ| ಪ್ರಭಾ ಅಧಿಕಾರಿ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಉದ್ಘಾಟನೆಗೊಂಡ ಹಿರಿಯ ನಾಗರಿಕರ ಸಮಗ್ರ ಚಿಕಿತ್ಸಾ ಸೇವೆಯ ಕುರಿತು ಮಾಹಿತಿಯನ್ನು ನೀಡಿದರು. ಹಿರಿಯ ನಾಗರಿಕರ ಆರೋಗ್ಯ ಸೇವೆಗಾಗಿ ರೂಪಿಸಿದ ಯೆನ್-ಹಿರಿಯ ನಾಗರಿಕರ ಆರೋಗ್ಯ ಕಾರ್ಡನ್ನು ಯೆನೆಪೋಯ ವಿಶ್ವ ವಿದ್ಯಾನಿಲಯದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಣ್ಣೂರು-ಕಲ್ಲಿಕೋಟೆ ವಿಶ್ವ ವಿದ್ಯಾನಿಲಯದ ಮಾಜಿ ಉಪಕುಲಪತಿ ಪ್ರೊ. ಅಬ್ದುಲ್ ರಹಿಮಾನ್‍ರವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಸಮಾಜ ಕಾರ್ಯ ಶಿಕ್ಷಣ ಕ್ಷೇತ್ರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃಧ್ಧಿಗಾಗಿ ಅಪೂರ್ವ ಕೊಡುಗೆ ನೀಡಿದ ಶಿಕ್ಷಣ ತಜ್ಞೆ ಹಾಗೂ ಸಮಾಜ ಸೇವಕಿ ಡಾ| ಒಲಿಂಡಾ ಪಿರೇರಾರವರನ್ನು ಯೆನೆಪೋಯ ವಿಶ್ವ ವಿದ್ಯಾನಿಲಯದ ಆರ್ಥಿಕ ಹಾಗೂ ಸಂಶೋಧನಾ ನಿರ್ದೇಶಕರಾದ ಯೆನೆಪೋಯ ಫರ್ಹಾದ್ ಶಾಲು ಹೊದಿಸಿ, ಫಲ ಫುಷ್ಪ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ| ಒಲಿಂಡಾ ಪಿರೇರಾರವರು ತಾನು ಕೈಗೊಂಡ ಸಮಾಜ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲರ ಪಾಲು ಇದೆ. ಸಮಾಜದಲ್ಲಿ ಅಲಕ್ಷಿತರಾದವರಿಗೆ ಹಾಗೂ ದುರ್ಬಲರಿಗೆ ಸೇವೆ ಮಾಡುವ ಅವಶ್ಯಕತೆಯ ಬಗ್ಗೆ ಒತ್ತಿಹೇಳಿದರು.

ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಮತ್ತು ವೈದ್ಯಕೀಯ ಅಧೀಕ್ಷಕರಾದ ಡಾ| ಮಹಮ್ಮದ್ ಅಮೀನ್ ವಾಣಿಯವರು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಲಭ್ಯವಿರುವ ಸೇವಾ ಸೌಲಭ್ಯಗಳ ಮಾಹಿತಿ ನೀಡಿದರು. ಹಾಗೆಯೇ ಆಸ್ಪತ್ರೆಯ ಹೊರರೋಗಿ ವಿಭಾಗದ ಕಾರ್ಯಾವಧಿ ಬೆಳಿಗ್ಗೆ 8.30 ರಿಂದ ಸಂಜೆ 6.00 ಗಂಟೆಯ ತನಕ ವಿಸ್ತರಣೆ, ರೋಗಿಗಳ ಸಹಾಯಕರಿಗೆ ಉಳಿದು ಕೊಳ್ಳುವ ವ್ಯವಸ್ಥೆ ಹಾಗೂ ಔಷಧಾಲಯದಲ್ಲಿ ಔಷಧಿಗಳ ಮೇಲೆ 10 ಶೇಕಡಾ ರಿಯಾಯಿತಿ ಸೌಲಭ್ಯವನ್ನು ಈ ಸಂದರ್ಭದಲ್ಲಿ ಪ್ರಕಟಿಸಿದರು. ಅಧ್ಯಕ್ಷತೆ ವಹಿಸಿದ ವಿಶ್ವ ವಿದ್ಯಾನಿಲಯದ ಕುಲಸಚಿವರಾದ ಡಾ| ಶ್ರೀಕುಮಾರ್ ಮೆನನ್ ವಿಶ್ವ ಮಟ್ಟದಲ್ಲಿ ಹಿರಿಯ ನಾಗರಿಕರ ಸ್ಥಿತಿಗತಿಯ ಬಗ್ಗೆ ವಿವರಿಸಿ ಅವರ ಕ್ಷೇಮಾಭಿವೃದ್ಧಿಗಾಗಿ ಎಲ್ಲರೂ ಸೇರಿ ಶ್ರಮಿಸಬೇಕೆಂದು ಕರೆನೀಡಿದರು.
ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತ ವಿಭಾಗದ ಅಧಿಕಾರಿ ಡಾ| ಸುನಿತಾ ಸಲ್ದಾನ್ಹ ಸ್ವಾಗತಿಸಿದ್ದು ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ| ಮಹಮ್ಮದ್ ಗುತ್ತಿಗಾರ್ ವಂದಿಸಿದರು. ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಐರಿನ್ ವೇಗಸ್‍ರವರು ಸನ್ಮಾನಿತರ ಪರಿಚಯ ಮಾಡಿದರು. ಯೆನೆಪೋಯ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ| ಆಶಾ ಶೆಟ್ಟಿ ಹಾಗೂ ಯೆನೆಪೋಯ ವಿಶ್ವ ವಿದ್ಯಾನಿಲಯದ ಸಹ ಕುಲಸಚಿವರಾದ ಡಾ| ಅಬ್ದುಲ್ ರಹಿಮಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಸ್ಪತ್ರೆ ಆಡಳಿತ ವಿಭಾಗದ ಕು.ಏವ್ರಿಲ್ ಕಾರ್ಯಕ್ರಮ ನಿರ್ವಹಿಸಿದರು.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕೆ.ಎಂ.ಸಿ ಅತ್ತಾವರ ಇದರ ನವ ಚೇತನ ಹಿರಿಯ ನಾಗರಿಕರ ಡೇ ಕೇರ್ ಕೇಂದ್ರದ ಸzಸ್ಯರು ಮತ್ತು ಯೆನೆಪೋಯ ಸಮುದಾಯ ನರ್ಸಿಂಗ್ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಂಚಿತವಾಗಿ ಆಸ್ಪತ್ರೆಯ ಸ್ಪೆಶಾಲಿಟಿ ಹೊರ ರೋಗಿ ವಿಭಾಗದಲ್ಲಿ ಹಿರಿಯ ನಾಗರಿಕರ ಕ್ಲಿನಿಕನ್ನು ಡಾ|ಒಲಿಂಡಾ ಪಿರೇರಾ ಉದ್ಘಾಟಿಸಿದರು. ರೋಗಿಗಳ ಸಹಾಯಕರಿಗೆ ಉಳಿದುಕೊಳ್ಳುವ ಸಲುವಾಗಿ ಝಲೇಕಾ ಭವನವನ್ನು ಹರಿಹರದ ಯೆನೆಪೋಯ ಮೆಡಿಕಲ್ ಕಾಲೇಜು ರೋಗಿಗಳ ಮಾಹಿತಿ ಕೇಂದ್ರದ ಶ್ರೀ ಮಹಮ್ಮದ್ ಆಲಿ ಉದ್ಘಾಟಿಸಿದರು.
