ಬಂಟ್ವಾಳ: ಅಮೂರು ಜಾತಿಯ ಮೀನಿನ ತಲೆಯ ಪದಾರ್ಥ ಸೇವಿಸಿ ಒಂದೇ ಮನೆಯ ನಾಲ್ವರು ಅಸ್ವಸ್ಥಗೊಂಡಿರುವ ಘಟನೆ ಅ. 1ರಂದು ತಾಲೂಕಿನ ಗೋಳ್ತಮಜಳು ಎಂಬಲ್ಲಿ ನಡೆದಿದ್ದು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾರೆ.

crime

ಇಲ್ಲಿನ ನಿವಾಸಿ ಹಮೀದ್ ಎಂಬವರ ಪತ್ನಿ ತಾಯಿರಾ, ಪುತ್ರ ಅಹ್ರಾಝ್, ಪುತ್ರಿ ಅನಿನ ಹಾಗೂ ತಾಯಿರಾರ ಅಕ್ಕ ಆಯಿಷ ಅಸ್ವಸ್ಥಗೊಂಡವರು. ಅಹ್ರಾಝ್ ಇಂದು ಮಧ್ಯಾಹ್ನ ಮಂಗಳೂರು ದಕ್ಕೆಯಿಂದ ಮನೆಗೆ ತಂದಿದ್ದ ಅಮೂರು ಮೀನಿನ ತಲೆಯನ್ನು ಮನೆಯಲ್ಲಿ ಪದಾರ್ಥ ಮಾಡಲಾಗಿತ್ತು. ಊಟದ ಕೆಲ ಸಮಯದ ಬಳಿಕ ಮನೆಮಂದಿ ವಾಂತಿ ಬೇಧಿಯಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಸ್ವಸ್ಥಗೊಂಡ ತಾಯಿರಾ, ಆಯಿಷಾ, ಅನಿನರನ್ನು ಕಲ್ಲಡ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಊಟ ಮಾಡಿದ ತಕ್ಷಣ ಮಂಗಳೂರಿಗೆ ತೆರಳಿದ್ದ ಅಹ್ರಾಝ್‍ಗೆ ಬಸ್ಸಿನಲ್ಲಿ ವಾಂತಿ ಬೇಧಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಅಮೂರು ಜಾತಿಯ ಮೀನು ಸುಮಾರು 15ರಿಂದ 20 ಕೆ.ಜಿ. ಭಾರವಿದ್ದು ಅದರ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ. ಮೀನಿನ ತಲೆಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದರಿಂದ ಮಾಂಸವನ್ನು ವಿದೇಶಗಳಿಗೆ ರಫ್ತು ಮಾಡುವ ಕಂಪೆನಿಗಳು ಮೀನಿನ ತಲೆಗಳು ಬೇಗ ಕೆಟ್ಟು ಹೋಗದಂತೆ ರಸಾಯನಿಕ ಸಿಂಪಡಿಸುತ್ತದೆ. ಪದಾರ್ಥಕ್ಕೆ ಮೊದಲು ಮೀನನ್ನು ತೊಳೆಯುವಾಗ ರಸಾಯನಿಕ ಮೀನಿನಲ್ಲಿಯೇ ಬಾಕಿಯಾದರೆ ಪದಾರ್ಥ ಸೇವಿಸಿದವರು ಅಸ್ವಸ್ಥರಾಗುವ ಪ್ರಕರಣಗಳು ನಡೆಯುತ್ತದೆ ಎಂದು ಸ್ಥಳೀಯ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *