ಮಂಗಳೂರು: ನೀರುಮಾರ್ಗದ ಪಡು ಬೊಂಡಂತಿಲದಲ್ಲಿರುವ ಸಂತ ಥೋಮಸರ ಶಾಲೆಯಲ್ಲಿ ಕಲಿಸಲಾಗುತ್ತಿರುವ ಅರೆಬಿಕ್ ಭಾಷೆಯನ್ನು ತಕ್ಷಣ ನಿಲ್ಲಿಸಬೇಕು. ಅಲ್ಲದೆ ಸಂಸ್ಥೆ ಶ್ರೀರಾಮ ಸೇನೆಯ ಕಾರ್ಯಕರ್ತರ ಮೇಲೆ ಹಾಕಿರುವ ಕೇಸನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ವಿಶ್ವಹಿಂದು ಪರಿಷತ್ ದ.ಕ.ಜಿಲ್ಲಾಧ್ಯಕ್ಷ ಜಗದೀಶ ಶೇಣವ ಎಚ್ಚರಿಸಿದ್ದಾರೆ.ಅವರು ಶನಿವಾರ ನೀರುಮಾರ್ಗದ ಪಡು ಬೊಂಡಂತಿಲದಲ್ಲಿ ನಡೆದ ಸಾರ್ವಜನಿಕ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಮಹಾಭಾರತ, ರಾಮಾಯಣದ ಆದರ್ಶ ಕಥೆಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ಎಂದು ಕೇಳಿದರೆ, ಅದು ಕೇಸರೀಕರಣ ಎನ್ನುವ ಮಂದಿ ಈ ಸಮಾಜದಲ್ಲಿದ್ದಾರೆ. ಆದರೆ ಅರೆಬಿಕ್ ಭಾಷೆ ಕಲಿಕೆಯ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ಅಲ್ಲದೆ ಕಲಿಸುವುದಾದದರೆ ಭಾರತೀಯ ಭಾಷೆಗಳೇ ಸಾಕಷ್ಟಿವೆ ಅದನ್ನು ಕಲಿಸಲಿ. ಅರೆಬಿಕ್ ಕಲಿಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ ಅವರು ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದರು. ಈ ಸಂದರ್ಭ ಮಾತನಾಡಿದ ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷ ಡಾ.ವೈ.ಭರತ್ ಶೆಟ್ಟಿ, ಘಟನೆಯ ಹಿನ್ನೆಲೆಯಲ್ಲಿ ಅಮಾಯಕರ ಮೇಲೆ ಕೇಸು ದಾಖಲಿಸಿರುವುದು ಖಂಡನೀಯ. ಇದು ರಾಜಕೀಯ ಪ್ರೇರಿತವಾಗಿ ನಡೆದಿದೆ. ಶಾಲಾ ಆಡಳಿತ ಮಂಡಳಿ ತಕ್ಷಣ ಕೇಸನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಬಿಜೆಪಿ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾ ಸಭೆಯಲ್ಲಿ ಉತ್ತರ ಮಂಡಲ ಬಿಜೆಪಿ ಉಪಾಧ್ಯಕ್ಷ ಸನತ್ ಕುಮಾರ್ ರೈ, ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಶಿಕಲಾ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಗೋಕುಲ್‍ದಾಸ್ ಶೆಟ್ಟಿ, ಉಳಾಯಿಬೆಟ್ಟು ಗ್ರಾ.ಪಂ.ಅಧ್ಯಕ್ಷ ವಸಂತಕುಮಾರ್ ಪೆರ್ಮಂಕಿ, ನೀರುಮಾರ್ಗ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಬಾಲಕೃಷ್ಣ, ನೀರುಮಾರ್ಗ ಗ್ರಾ.ಪಂ.ಅಧ್ಯಕ್ಷೆ ಕಸ್ತೂರಿ, ಉಪಾಧ್ಯಕ್ಷ ಕಿಶೋರ್, ಗ್ರಾಂ.ಪಂ. ಸದಸ್ಯರಾದ ಚೇತನ್, ಶಶಿಕುಮಾರ್, ಸಚಿನ್ ಹೆಗ್ಡೆ ಊರಿನ ಪ್ರಮುಖರಾದ ಕುಂಞಣ್ಣ ಶೆಟ್ಟಿ, ಪದ್ಮನಾಭ ಆಳ್ವ, ಮೋಹನ್‍ದಾಸ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಅರೆಬಿಕ್ ಕಲಿಕೆ ನಿಲ್ಲಿಸುವ ಭರವಸೆ
ನೀರುಮಾರ್ಗದಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡುತ್ತಿದ್ದಂತೆ ಸಂತ ಥೋಮಸರ ಶಾಲೆಯ ಶಾಲಾಭಿವೃದ್ಧಿಯ ಸಮಿತಿಯ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯ ನಿರ್ಣಯದಲ್ಲಿ ಅರೆಬಿಕ್ ಭಾಷೆ ಕಲಿಸುವುದನ್ನು ನಿಲ್ಲಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಸ್ಥಗಿತಗೊಳಿಸಿ ಕೇವಲ ಪ್ರತಿಭಟನಾ ಸಭೆ ನಡೆಸಲಾಯಿತು. ಕೇಸು ಹಿಂಪಡೆಯುವ ನಿರ್ಧಾರವನ್ನು ಒಂದು ವಾರದ ಒಳಗೆ ನಿರ್ಧರಿಸುವುದಾಗಿ ಶಾಲಾಡಳಿತ ಮಂಡಳಿ ತಿಳಿಸಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಅರೆಬಿಕ್ ಭಾಷೆ ಕಲಿಕೆಗೆ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಇನ್ನುಮುಂದೆ ಆ ಭಾಷೆ ಕಲಿಸುವುದನ್ನು ನಿಲ್ಲಿಸುವ ನಿರ್ಧಾರಕ್ಕೆ ಬರಲಾಗಿದೆ. ಅಲ್ಲದೆ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದೇವೆ.
-ಮೆಲ್ವಿನ್ ಬ್ರ್ಯಾಗ್ಸ್,
ಸಂತ ಥೋಮಸರ ಶಾಲಾ ಮುಖ್ಯೋಪಾಧ್ಯಾಯರು
