ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕರು ಲೋಕಾಯುಕ್ತಕ್ಕೆ ಸಲ್ಲಿಸಿರುವ 79 ಹಳೆ ದೂರು ಸಹಿತ 40 ಹೊಸ ದೂರುಗಳು ದಾಖಲಾಗಿದ್ದು, ಶನಿವಾರ ನಡೆಸಿದ ವಿಶೇಷ ಪರಿಶೀಲನೆ ಸಭೆಯಲ್ಲಿ 74ಕ್ಕೂ ಅಧಿಕ ಪ್ರಕರಣದ ವಿಲೇವಾರಿ ಮಾಡಲಾಗಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಶ್ ಡಿ. ಆಡಿ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹುತೇಕವಾಗಿ ಕಟ್ಟಡ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಬಂದಿರುವ ದೂರುಗಳನ್ನು ಪಾಲಿಕೆ ಆಯುಕ್ತರು ಹಾಗೂ ಮೂಡಾ ಆಯುಕ್ತರಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.ಕಟ್ಟಡಗಳಲ್ಲಿ ಪಾರ್ಕಿಂಗ್ಗೆ ಮೀಸಲಿಟ್ಟ ಜಾಗದಲ್ಲಿ ಬಾಡಿಗೆ ನೀಡಿರುವ ಬಗ್ಗೆ ಗಮನ ಹರಿಸುವಂತೆ ತಿಳಿಸಲಾಗಿದೆ. ಯಾವುದೇ ದೂರು ಬಂದಿಲ್ಲವಾದರೂ ಬೀಚ್ಗಳ ಶುಚಿತ್ವ ಕಾಪಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಅವರು ಹೇಳಿದರು.ಮಂಗಳೂರಿನ ಭೌಗೋಳಿಕ ಲಕ್ಷಣಕ್ಕೆ ಅನುಗುಣವಾಗಿ ಕಟ್ಟಡ ನಿರ್ಮಿಸಬೇಕಾಗಿದ್ದು, ಯಾವುದೇ ಚರಂಡಿ, ದೊಡ್ಡ ಮೋರಿಗಳ ಅತಿಕ್ರಮಣ ನಡೆಸದಂತೆ ಸ್ಥಳೀಯಾಡಳಿತೆ ನೋಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದರು.ಈಗಾಗಲೇ 11 ಸಾವಿರಕ್ಕೂ ಅಧಿಕ ದೂರುಗಳ ಪರಿಶೀಲನೆ ನಡೆಸಲಾಗಿದ್ದರೂ ಲೋಕಾಯುಕ್ತದಲ್ಲಿ ಒಟ್ಟು 15 ಸಾವಿರ ದೂರುಗಳು ಬಾಕಿ ಇವೆ ಎಂದು ಹೇಳಿದ ಅವರು, ಮುಂದಿನ ಆರು ತಿಂಗಳ ಅವಧಿಯಲ್ಲಿ 14 ಸಾವಿರಕ್ಕೂ ಅಧಿಕ ದೂರುಗಳ ವಿಲೇವಾರಿ ನಡೆಸುವ ಗುರಿ ಇರಿಸಲಾಗಿದೆ ಎಂದರು.ಮಂಗಳೂರು ಅನುದಾನಿತ ಶಾಲೆಯ ಆವರಣದಲ್ಲೇ ಅಕ್ರಮವಾಗಿ ಕಾರ್ಯಾಚರಿಸುತ್ತಿದ್ದ ಪ್ರೌಢಶಾಲೆಯಲ್ಲಿ ಬೋಧಿಸುತ್ತಿದ್ದ ಸರಕಾರಿ ಶಿಕ್ಷಕರು ಹಾಗೂ ಅವರಿಗೆ ಸಂಬಳ ನೀಡುತ್ತಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಲೋಕಾಯುಕ್ತ ಛೀಮಾರಿ ಹಾಕಿದೆ. ಎರಡು ವರ್ಷಗಳ ಕಾಲ ಎರಡು ಕಡೆಗಳಲ್ಲಿ ಸಂಬಳ ಪಡೆಯುತ್ತಿದ್ದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಉಪಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಬಿ. ಅಡಿ ಅವರ ಸಂಬಳವನ್ನು ಎರಡು ತಿಂಗಳೊಳಗೆ ವಾಪಾಸು ಪಡೆಯುವಂತೆ ಡಿಡಿಪಿಐಗೆ ಆದೇಶಿಸಿದ್ದಾರೆ. ಇದರ ವರದಿಯನ್ನು ಕೂಡಲೇ ಲೋಕಾಯುಕ್ತ ನೀಡುವಂತೆ ತಾಕೀತು ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಪುಣಚದಲ್ಲಿ ಅನುದಾನಿತ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಸ್ತ್ರೀಜಿ ಮೆಮೊರಿಯಲ್ ಪ್ರೌಢಶಾಲೆ 2006ರಿಂದ ಆರಂಭಗೊಂಡಿತ್ತು. ಆದರೆ, ಇದಕ್ಕೆ ಖಾಸಗಿ ಶಿಕ್ಷಕರನ್ನು ನೇಮಕಾತಿ ಮಾಡುವ ಬದಲು ಅಲ್ಲಿಯೇ ಇದ್ದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಮೂವರು ಶಿಕ್ಷಕರೇ ಕಾರ್ಯಾಚರಿಸುತ್ತಿದ್ದರು. ಅವರು 2008ರವರೆಗೆ ಎರಡೂ ಕಡೆಯಲ್ಲೂ ಸಂಬಳ ಪಡೆಯುತ್ತಿದ್ದರು. ಸಾಲದಕ್ಕೆ ಪ್ರೈಮರಿ ಶಾಲೆಯ ಅಕ್ಷರ ದಾಸೋಹವನ್ನೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೂ ಬಡಿಸುತ್ತಿದ್ದರು. ಆದ್ರೆ, ಈ ಪ್ರೌಢಶಾಲೆ ಅಕ್ರಮವಾಗಿ ನಡೆಯುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಗೊತ್ತಾದ ಕೂಡಲೇ ಇದರ ಮಾನ್ಯತೆಯೂ 2010ರ ಜೂನ್ 7ರಂದು ರದ್ದಾಗಿತ್ತು.
ಪ್ರೌಢಶಾಲೆ ರದ್ದಾಗುತ್ತಿದ್ದಂತೆ ಅಲ್ಲಿನ ವಿದ್ಯಾರ್ಥಿಗಳನ್ನು ಪಕ್ಕದ ಶಾಲೆಗೆ ವರ್ಗ ಮಾಡಲಾಗಿತ್ತು. ಜೊತೆಗೆ ಅಲ್ಲಿನ ಮೂವರು ಶಿಕ್ಷಕರಿಂದ ಒಂದೂವರೆ ತಿಂಗಳ ತಲಾ 4000ರೂ. ವೇತನವನ್ನು ವಾಪಾಸು ಪಡೆದು ಎಲ್ಲವೂ ಸರಿಯಾಯಿತು ಎಂದು ಕೈತೊಳೆದುಕೊಂಡಿತ್ತು. ಆದರೆ, ಸಿ.ಎಸ್. ಶಾಸ್ತ್ರಿ ಪ್ರಕರಣವನ್ನು ಲೋಕಾಯುಕ್ತ ಗಮನಕ್ಕೆ ತಂದಿತ್ತು. ಇದರನ್ವಯ ಇಂದು ನಡೆದ ವಿಚಾರಣೆಯಲ್ಲಿ ಎರಡು ವರ್ಷಗಳಿಂದ ಅಕ್ರಮವಾಗಿ ಬೋಧಿಸುತ್ತಿದ್ದ ಶಿಕ್ಷಕರ ಅಷ್ಟೂ ವೇತನವನ್ನು ವಾಪಾಸು ಪಡೆಯುವಂತೆ ಆದೇಶಿಸಿದೆ.
ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ, ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು