ಮುಂಬಯಿ, ಜೂ.06: ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮವು ತುಳುನಾಡಿನಲ್ಲಿ ಜಾತಿ ಮತ ಭಾಷಾ ಸಾಮರಸ್ಯ ಎಂಬ ಉದ್ದೇಶದೊಂದಿಗೆ ನಡೆಯುವುದರಿಂದ ಈ ಉತ್ಸವವು ಚರಿತ್ರೆಯ ಪುಟಗಳಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ. ಹಾಗೂ ಕಾರ್ಯಕ್ರಮಕ್ಕೆ ಅಖಿಲ ಭಾರತ ತುಳು ಒಕ್ಕೂಟದ ಸಂಪೂರ್ಣ ಸಹಕಾರ ನೀಡುವುದಾಗಿ ಅಖಿಲ ಭಾರತ ತುಳು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಿಟ್ಟೆ ಶಶಿಧರ ಶೆಟ್ಟಿ ತಿಳಿಸಿದರು.
ಕಳೆದ ಭಾನುವಾರ ಬದಿಯಡ್ಕದ ಗಲ್ಫ್ ಕಾಂಪ್ಲೆಕ್ಸ್ನ ಕೋ.ಆಪರೇಟಿವ್ ಕಾಲೇಜು ಸಭಾಗೃಹದÀಲ್ಲಿ ವಿಶ್ವ ತುಳುವೆರೆ ಆಯನೊ ಸ್ವಾಗತ ಸಮಿತಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಶಶಿಧರ ಶೆಟ್ಟಿ ಮಾತನಾಡಿದರು.
ತುಳುವೆರೆ ಆಯನೊ ಕೂಟದ ಅಧ್ಯಕ್ಷರಾದ ಡಾ| ಶ್ರೀನಿಧಿ ಸರಳಾಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಡಿಸೆಂಬರ್, 2016ರ 9ರಿಂದ 13 ರ ತನಕ ನಡೆಯವ ವಿಶ್ವ ತುಳುವೆರೆ ಆಯನೊ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುವಂತೆ ಕರೆಯಿತ್ತರು.
ವಿವಿಧ ಸಂಘ ಸಂಸ್ಥೆಗಳ ಭಾರವಾಹಿಗಳು, ರಾಜಕೀಯ ನೇತಾರರು, ಸಾಮಾಜಿಕ ಧಾರ್ಮಿಕ ಮುಂದಾಳು ಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಬರುವ ಜೂನ್ 19ರ ಭಾನುವಾರ ಮಧ್ಯಾಹ್ನ 2.00 ಗಂಟೆಗೆ ಬದಿಯಡ್ಕ ಗುರು ಸದನದಲ್ಲಿ ನಡೆಯುವ ಸ್ವಾಗತ ಸಮಿತಿ ರೂಪೀಕರಣ ಸಭೆಯನ್ನು ಯಶಸ್ವಿ ಗೊಳಿಸಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.


