ಮುಂಬಯಿ :ಬಿ.ಎಸ್. ಕೆ.ಬಿ. ಎಸೋಸಿಯೇಶನ್, ಸಾಯನ್ ಗೋಕುಲದಲ್ಲಿ ಜ.26 ರಂದು ಮಂಗಳವಾರದಂದು ಭಾರತದ 67 ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಪ್ರಾತಃಕಾಲ 9.30 ಕ್ಕೆ ಸಂಘದ ಅಧ್ಯಕ್ಷರಾದ ಡಾ. ಸುರೇಶ್ ಎಸ್ ರಾವ್ ಅವರು ಧ್ವಜಾರೋಹಣ ಗೈದರು. 
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ನುರಿತ ಕಲಾವಿದರಿಂದ ‘ನಾದ ಲಹರಿ’ ತ್ಯಾಗರಾಜ ವಿರಚಿತ ಪಂಚರತ್ನ ಕೃತಿಗಳು ಶ್ರೀಮತಿ ಮೀನಾಕ್ಷಿ ಶ್ರೀಯಾನ್ ಹಾಗೂ ಬಳಗದವರಿಂದ ವೈವಿಧ್ಯಮಯ ನೃತ್ಯಗಳು ಜರಗಿದವು. ಉಡುಪಿಯಿಂದ ಆಗಮಿಸಿದ ಖ್ಯಾತ ಹಾಸ್ಯ ಕಲಾವಿದರಾದ ಶ್ರೀ ಡುಂಡಿರಾಜ್ ಹಾಗೂ ಶ್ರೀಮತಿ ಸಂಧ್ಯಾ ಶೆಣೈಯವರ ‘ಹಾಸ್ಯ ಲಹರಿ’ ಶ್ರೋತೃಗಳನ್ನು ನಗೆಗಡಲಲ್ಲಿ ತೇಲಿಸಿತು. ಯುವ ವಿಭಾಗದ ಸುಮಾರು 40 ಕಲಾವಿದರು ಭಾರತದ ವಿವಿಧ ರಾಜ್ಯಗಳ ಜಾನಪದ ನೃತ್ಯಗಳನ್ನು ಪ್ರಸ್ತುತಪಡಿಸಿ ಮನರಂಜಿಸಿದರು. ಶ್ರೀಮತಿ ಸಂಧ್ಯಾ ಶೆಣೈ ಹಾಗೂ ಶ್ರೀ ದುಂಡಿರಾಜ್ ರವರನ್ನು ಡಾ ಸುರೇಶ ರಾವ್ ಹಾಗೂ ಹರಿದಾಸ ಭಟ್ ಶಾಲು ಹೊದಿಸಿ ಹೂ ಗುಚ್ಚವನ್ನಿತ್ತು ಗೌರವಿಸಿದರು. ಕುಸುಮ್ ಶ್ರೀನಿವಾಸ್, ಜಯಲಕ್ಷ್ಮಿ ಹೊಳ್ಳ, ಪ್ರೇಮಾ ರಾವ್, ಗುರುರಾಜ್ ಭಟ್ ಹಾಗೂ ಅರುಣಾ ಆಚಾರ್ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆ ಗೈದರು.
ಡಾ ಸುರೇಶ್ ಎಸ್ ರಾವ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತೋನ್ಸೆ ವಿಜಯಕುಮಾರ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸಂಘದ ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ‘ಸಂಜೀವನಿ ಟ್ರಸ್ಟ್’ ವತಿಯಿಂದ ವರ್ಷಂಪ್ರತಿ ಕೊಡಲ್ಪಡುವ ‘ಗೋಕುಲ ರತ್ನ’ ಪ್ರಶಸ್ತಿಯನ್ನು ಗೋಕುಲದ ಹಿರಿಯ ಸದಸ್ಯೆ,ಕೊಡುಗೈ ದಾನಿ, ಸಮಾಜ ಸೇವಕಿ, ಶ್ರೀಮತಿ ರತ್ನಾ ಆಚಾರ್ಯ ಅವರಿಗೆ ಅಧ್ಯಕ್ಷರು ಹಾಗೂ ಅತಿಥಿಗಳು ಶಾಲು ಹೊದಿಸಿ, ಸ್ಮರಣಿಕೆ, ಸನ್ಮಾನ ಪತ್ರದೊಂದಿಗೆ ಪ್ರದಾನಿಸಿದರು. ಆಶಾ ಭಟ್ ರತ್ನಾ ಆಚಾರ್ಯ ಅವರ ಸನ್ಮಾನ ಪತ್ರವನ್ನು ವಾಚಿಸಿದರು. ಸಂಜೀವನಿ ಟ್ರಸ್ಟ್ ನ ಟ್ರಸ್ಟಿಗಳಲ್ಲಿ ಒಬ್ಬರಾದ ಲಕ್ಷ್ಮೀಶ್ ಆಚಾರ್ಯರವರು ಟ್ರಸ್ಟ್ ನ ಬಗ್ಗೆ ಹಾಗೂ ಪ್ರಶಸ್ತಿಯ ಬಗ್ಗೆ ಮಾತನ್ನಾಡಿದರು. ಶಕುಂತಲಾ ಭಟ್ ಅಭಿನಂದನಾ ಭಾಷಣವನ್ನು ಮಾಡಿದರು. ಅತ್ಯಂತ ಭಾವುಕರಾದ ರತ್ನಾ ಆಚಾರ್ಯರವರು ಸನ್ಮಾನಕ್ಕೆ ಉತ್ತರ ನೀಡುತ್ತಾ ತನ್ನ ಇನ್ನೊಂದು ಮನೆಯಂತಿರುವ ಗೋಕುಲದಿಂದ ಪ್ರಾಪ್ತಿಯಾದ ಪ್ರಶಸ್ತಿಗೆ ಆಭಾರ ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿ ಟಿ. ವಿಜಯಕುಮಾರ್ ಶೆಟ್ಟಿಯವರು ಗೋಕುಲದಲ್ಲಿ ಸದಾ ನಡೆಯುವ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಾ ರತ್ನಮ್ಮನಂತಹ ಹಿರಿಯ ಚೇತನಗಳನ್ನು ಗೌರವಿಸುವುದು ಶ್ಲಾಘನೀಯ ಎಂದರು. ಅಧ್ಯಕ್ಷರಾದ ಡಾ. ಸುರೇಶ್ ರಾವ್ ಈ ಸಂದರ್ಭದಲ್ಲಿ ಮಾತನಾಡುತ್ತಾ ಕಳೆದ ವರ್ಷದಲ್ಲಿ ಬಿ.ಎಸ್.ಕೆ. ಬಿ. ವತಿಯಿಂದ ಬ್ರಾಹ್ಮಣ ಸಮಾವೇಶ, ಶ್ರೀನಿವಾಸ ಕಲ್ಯಾಣದಂತಹ ವಿಶೇಷ ಕಾರ್ಯಕ್ರಮಗಳು ಅತ್ಯಂತ ವೈಭವೋಪೇತವಾಗಿ ನಡೆದವು. ವರ್ಷವಿಡೀ ಗೋಕುಲದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಉತ್ತಮವಾಗಿ ಜರಗುತ್ತಿವೆ. ಇದು ಅತ್ಯಂತ ಸಂತೋಷದಾಯಕ. ಗೋಕುಲದ ಅಭಿವೃದ್ಧಿಗಾಗಿ ನಾವು ಹಮ್ಮಿಕೊಂಡ ಯೋಜನೆಗಳಿಗೆ ಸದಸ್ಯ ಬಾಂಧವರು ತನು ಮನ, ಧನದಿಂದ ಸಹಕರಿಸಬೇಕು ಎಂದು ಕರೆ ನೀಡಿದರು.ನಂತರ ವೃತ್ತಿಪರ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಅಧ್ಯಕ್ಷರು ಸ್ಮರಣಿಕೆಗಳನ್ನಿತ್ತು ಪುರಸ್ಕರಿಸಿದರು.ಕೋಶಾಧಿಕಾರಿ ಹರಿದಾಸ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಚಂದ್ರಶೇಖರ್ ಭಟ್ ಧನ್ಯವಾದ ಸಮರ್ಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಕೊನೆಯ ಅಂಗವಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ತೋನ್ಸೆ ವಿಜಯಕುಮಾರ ಶೆಟ್ಟಿಯವರ ನಿರ್ದೇಶನದಲ್ಲಿ ಸಂಘದ ನುರಿತ ಕಲಾವಿದರು ಪ್ರಸ್ತುತ ಪಡಿಸಿದ ‘ಅಮ್ಮ ನಿವೃತ್ತಿಯಾಗುತ್ತಾರೆ’ ಕನ್ನಡ ನಾಟಕ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಅಂಜನಾ ಭಟ್ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.



