ನಾಡು, ನುಡಿಯ ಬಲವರ್ಧನೆಗೆ ಶ್ರಮಿಸುತ್ತಿರುವ ಚಿಣ್ಣರಬಿಂಬದ ಕಾರ್ಯವೈಖರಿ
ಶ್ಲಾಘನೀಯ- ಸುರೇಶ್ ಶೆಟ್ಟಿ
ಮುಂಬಯಿ:-ಇಂದಿನ ಮಕ್ಕಳು ನಮ್ಮ ಮುಂದಿನ ದೇಶವನ್ನು ಕಟ್ಟುವ ಕಂಬಗಳು. ಒಂದು ಕಟ್ಟಡವನ್ನುಕಟ್ಟುವಾಗ ತಳಕಟ್ಟು ಭಧ್ರವಾಗಿರಬೇಕು. ನಮ್ಮ ಬೆಳೆಯುತ್ತಿರುವ ಮಕ್ಕಳಿಗೆ ಬಾಲ್ಯದಲ್ಲಿಯೇ ಉತ್ತಮ ವಿದ್ಯೆಯೊಂದಿಗೆ ನಾಡು, ನುಡಿ, ಸಂಸ್ಕೃತಿಯ ಅರಿವನ್ನು ಮೂಡಿಸುವ ಅಗತ್ಯವಿದೆ. ನಮ್ಮ ನಾಡಿನಲ್ಲಿಸಂಸ್ಕೃತಿ, ಸಂಸ್ಕಾರ ತುಂಬಿ ತುಳುಕುವ ಕಾಲವೊಂದಿತ್ತು. ಆದರೆ ಇಂದು ಆಧುನಿಕ ಯುಗದಲ್ಲಿ
ಎಲ್ಲವನ್ನೂ ಮರೆತು ನಾವೂ ಆಧುನಿಕರಾಗುತ್ತಿದ್ದೇವೆ. ನಮ್ಮತನವನ್ನು ನಾವು ಮರೆಯುತ್ತಿದ್ದೇವೆ.ಇಂತಹ ಸಂದರ್ಭದಲ್ಲಿ ಮುಂಬಯಿಯಂತಹ ಮರಾಠಿ ಮಣ್ಣಿನಲ್ಲಿ ಶ್ರೀ ಪ್ರಕಾಶ್ ಭಂಡಾರಿ ಅವರ
ನೇತೃತ್ವದಲ್ಲಿ ಚಿಣ್ಣರಬಿಂಬ ಎಂಬ ಸಂಸ್ಥೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಮೆಚ್ಚಬೇಕಾದದ್ದು. ಈ ಕಾರ್ಯಕ್ರಮವನ್ನು ವೀಕ್ಷಿಸಿದ ನನ್ನ ಮನಸ್ಸಿನಲ್ಲಿ ಮೂಡಿದ್ದ ಒಂದು ಮಾತೆಂದರೆ ನಾನು ಚಿಕ್ಕವನಿರುವಾಗ
ಇಂತಹ ಒಂದು ಸಂಸ್ಥೆಯಿದ್ದಿದ್ದರೆ ಇಂದು ನಾನೂ ಕೂಡಾ ತುಳು ಕನ್ನಡದಲ್ಲಿ ಮಾತನಾಡುತ್ತಿದ್ದೆ ಎಂದುನುಡಿದರು.
ಅವರು ಜನವರಿ 2 ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ.ಟಿ.ಭಂಡಾರಿ
ಸಭಾಗೃಹದಲ್ಲಿ ಜರಗಿದ ಚಿಣ್ಣರಬಿಂಬದ 13ನೇ ವಾರ್ಷಿಕ ಮಕ್ಕಳ ಉತ್ಸವವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಅವರು ಮುಂದುವರೆಸುತ್ತಾ ಇಲ್ಲಿ ನನ್ನ ಗಮನ ಸೆಳೆದ
ಇನ್ನೊಂದು ವಿಷಯವೆಂದರೆ ಮಕ್ಕಳ ಸಮವಸ್ತ್ರ. ಇಲ್ಲಿ ಯಾವ ಜಾತಿ ಮತ ಭೇದವಿಲ್ಲದೆ ಒಂದಾಗಿ ಬೆರೆತು ಬಾಳುವ ಈ ಚಿಣ್ಣರಬಿಂಬದ ಮಕ್ಕಳು ನಿಜವಾಗಿ ನಮ್ಮ ದೇಶದ ಆಸ್ತಿ ಎಂದು ಅವರು
ಚಿಣ್ಣರಬಿಂಬದ ಕಾರ್ಯವೈಖರಿಯನ್ನು ಕೊಂಡಾಡಿದರು.ಸಮಾರಂಭದ ಅಧ್ಯಕ್ಷಸ್ಥಾನವನ್ನು ವಹಿಸಿದ್ದ ಬಂಟರ ಸಂಘದ ಅಧ್ಯಕ್ಷರಾದ ಕರ್ನಿರೆ ವಿಶ್ವನಾಥ
ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ಜೀವನದಲ್ಲಿ ಬಾಲ್ಯ ಅನ್ನುವುದು ಅತ್ಯಂತ ಪ್ರಮುಖವಾದ ಘಟ್ಟ. ಈ ಸಮಯದಲ್ಲಿ ಮಕ್ಕಳ ಮನಸ್ಸಿನಲ್ಲಿ ಒಳ್ಳೆಯ ಆಚಾರ ವಿಚಾರಗಳನ್ನು ಮೂಡಿಸಿದಾಗ ಮುಂದೆ
ಅವರು ಒಳ್ಳೆಯ ಪ್ರಜೆಗಳಾಗುವುದರಲ್ಲಿ ಎರಡು ಮಾತಿಲ್ಲ. ಚಿಣ್ಣರಬಿಂಬದ ಮಕ್ಕಳಲ್ಲಿನ ಶಿಸ್ತನ್ನು ಕಂಡುನಾನು ಬೆರಗಾಗಿದ್ದೇನೆ. ಎಲ್ಲಿ ಹೋದರೂ ಅವರ ನಡೆ ನುಡಿಯಲ್ಲಿ ನಾವು ಈ ಮಕ್ಕಳು ಚಿಣ್ಣರಬಿಂಬದ
ಮಕ್ಕಳು ಎಂದು ಗುರುತಿಸಬಹುದಾಗಿದೆ. ಅಳಿದು ಹೋಗುತ್ತಿರುವ ನಮ್ಮ ಸಂಸ್ಕೃತಿಯ ಜೊತೆಯಲ್ಲಿ ನಮ್ಮ ಭಾಷೆಯ ಸೊಗಡನ್ನು ಪಸರಿಸಿ ಉಳಿಸಿ ಬೆಳೆಸುವ ಕಾರ್ಯವನ್ನು ಚಿಣ್ಣರಬಿಂಬ ಮಾಡುತ್ತಿದೆ.
ಮರಾಠಿ ಮಣ್ಣಿನಲ್ಲಿ ಇಂತಹ ಒಂದು ಅದ್ಭುತವಾದ್ ಕಾರ್ಯವನ್ನು ಮಾಡುತ್ತಿರುವ ಪ್ರಕಾಶ ಭಂಡಾರಿಅವರ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಸಂಚಾಲಿತ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಜಯರಾಮ ಶೆಟ್ಟಿ ಅವರು ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿ ಸೇರಿರುವ ಚಿಣ್ಣರು
ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದ್ದಾರೆ. ಬೆಳೆಯುತ್ತಿರುವ ಮಕ್ಕಳ ಮನಸ್ಸಿಗೆ ಇಲ್ಲಿ ಉತ್ತಮ ತರಬೇತಿ ದೊರೆಯುತ್ತಿದೆ. ಆದ್ದರಿಂದಲೇ ಈ ಮಕ್ಕಳು ತಮ್ಮಲ್ಲಿನ ಅಧ್ಭುತ ಪ್ರತಿಭೆಯನ್ನು ಇಲ್ಲಿ ಮೆರೆದಿದ್ದಾರೆ.
ಆ ಮಕ್ಕಳಿಗೆ ಇಂತಹ ತರಬೇತಿ ಹಾಗೂ ವೇದಿಕೆಯನ್ನು ಕಲ್ಪಿಸಿಕೊಡುವ ಅವಶ್ಯಕತೆ ಇದೆ. ಅದನ್ನುಮನಗಂಡು ಚಿಣ್ಣರಬಿಂಬದ ಸಂಸ್ಥೆಯ ಮುಖಾಂತರ ಮಾಡುತ್ತಿರುವ ಈ ಕಾರ್ಯ ಅಭಿನಂದನೀಯ
ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಭವಾನಿ ಶಿಪ್ಪಿಂಗ್ ಕಂಪನೆ ಮುಂಬಯಿ ಇದರ ಕಾರ್ಯಾಧ್ಯಕ್ಷರೂ ಆಡಳಿತ ನಿರ್ದೇಶಕರೂ ಆಗಿರುವ ಕೆ.ಡಿ.ಶೆಟ್ಟಿಯವರು ಮಾತನಾಡುತ್ತಾ ನಾನು ಈ
ಮಕ್ಕಳಲ್ಲಿ ನಮ್ಮ ದೇಶದ ಭವಿಷ್ಯವನ್ನು ಕಂಡೆನು. ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆಯಿದ್ದು ಅವಕಾಶದ ಕೊರತೆಯಿರುತ್ತದೆ. ಇಲ್ಲಿನ ಮಕ್ಕಳ ಸಾಂಸ್ಕೃತಿಕ ಉತ್ಸವವು ಶಿಸ್ತಿನಿಂದ ಕೂಡಿದ್ದು ಮಕ್ಕಳಿಗೆ
ಪ್ರತಿಯೊಂದು ಕಾರ್ಯಕ್ರಮವೂ ವಿಶೇಷ ಮೆರುಗನ್ನು ನೀಡಿದೆ. ಇಂತಹ ಅಪರೂಪದ ಕಾರ್ಯಕ್ಕೆ ನಾವೆಲ್ಲರೂ ಪ್ರಕಾಶ್ ಭಂಡಾರಿ ಅವರ ಜೊತೆ ಕೈಜೋಡಿಸಬೇಕಾಗಿದೆ ಎಂದು ನುಡಿದರು.
ಇಂದು ಎಲ್ಲಿ ನೋಡಿದರೂ ಅನಾಚಾರಗಳು ನಡೆಯುತ್ತಿರುತ್ತವೆ. ಅಂತರ್ಜಾಲವು ಮಕ್ಕಳನ್ನು ತಪ್ಪು ಹಾದಿಗೆ ಎಳೆಯುತ್ತಿದೆ. ಆದರೆ ಚಿಣ್ಣರಬಿಂಬದ ಚಿಣ್ಣರು ಸದಾ ಅಧ್ಯಯನ, ತರಬೇತಿ
ಶಿಬಿರಗಳಲ್ಲಿ ವ್ಯಸ್ತರಾಗಿರುವುದನ್ನು ಕಂಡಿದ್ದೇನೆ. ಪ್ರತಿ ಭಾನುವಾರ ಈ ಮಕ್ಕಳು ಅಮೂಲ್ಯ ಸಮಯವನ್ನು ವ್ಯರ್ಥಮಾಡದೆ ನಮ್ಮ ಭಾಷೆಯನ್ನು ಕಲಿಯುತ್ತಿದ್ದಾರೆ. ಮಕ್ಕಳಿಗೆ ವಿದ್ಯೆಯೊಂದಿಗೆ
ಉತ್ತಮ ಸಂಸ್ಕಾರದ ಅಗತ್ಯವಿದೆ. ಈ ಎಲ್ಲ ನೈತಿಕ ಶಿಕ್ಷಣವನ್ನು ಚಿಣ್ಣರಬಿಂಬ ಕಲಿಸುತ್ತಿದೆ ಜೊತೆಯಲ್ಲಿ ಮುಂಬಯಿಯಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿದೆ ಎನ್ನಲು ಅಭಿಮಾನವೆನಿಸುತ್ತದೆ ಎಂದು ಬಿಲ್ಲವರ
ಅಸೋಯೇಷನ್ನಿನ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಅವರು ಹರ್ಷ ವ್ಯಕ್ತಪಡಿಸಿದರು.ಇನ್ನೋರ್ವ ಮುಖ್ಯ ಅತಿಥಿ ಕಡಂದಲೆ ಸುರೇಶ್ ಭಂಡಾರಿ ಅವರು ಮಕ್ಕಳು ಹೇಗಿರಬೇಕು
ಎಂದಾಗ ನಾವು ತಕ್ಷಣ ಚಿಣ್ಣರಬಿಂಬದ ಮಕ್ಕಳಂತಿರಬೇಕು ಎನ್ನಬಹುದು. ಯಾಕೆಂದರೆ ಆ ಮಕ್ಕಳಲ್ಲಿ ಶಿಸ್ತು ಇದೆ, ಸಂಸ್ಕ್ರತಿಯ ಅರಿವಿದೆ, ಸಂಸ್ಕಾರವಿದೆ, ನಾಡು ನುಡಿಯ ಬಗ್ಗೆ ಅಭಿಮಾನವಿದೆ. ಇಂತಹ
ಮಕ್ಕಳೇ ನಿಜವಾಗಿ ನಮ್ಮ ಮುಂದಿನ ದೇಶದ ಭವ್ಯ ಭವಿಷ್ಯದ ನೇತಾರರಾಗಬೇಕು. ಆಗ ದೇಶ ಖಂಡಿತವಾಗಿಯೂ ಉದ್ದಾರವಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು. ಇದರ ಹಿಂದೆ ಪ್ರಕಾಶ್
ಭಂಡಾರಿ ಹಾಗೂ ಅವರ ಪರಿವಾರದ ಶ್ರಮ ಎಷ್ಟಿದೆ ಎನ್ನುವುದನ್ನು ನಾವು ಅರ್ಥೈಸಬಹುದು ಎಂದು ಅವರು ನುಡಿದರು. ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರು ಮಕ್ಕಳ
ಪ್ರತಿಭೆಯನ್ನು ಕಂಡು ಮೂಖಳಾಗಿದ್ದೇನೆ. ಭಜನೆ ಹಾಡುವಾಗ ಅವರಲ್ಲಿನ ಶಿಸ್ತು ಎದ್ದು ಕಾಣುತ್ತಿತ್ತು. ಅದು ಇಂದಿನ ಅಗತ್ಯವಾಗಿದೆ. ಶಿಸ್ತನ್ನು ಬಾಲ್ಯದಲ್ಲಿಯೇ ಕಲಿಸಬೇಕು. ಆಗ ಮಾತ್ರ ಮಕ್ಕಳು ಮುಂದೆ
ಸಜ್ಜನರಾಗಿ ಬಾಳಿ ಬೆಳಗುತ್ತಾರೆ. ನನಗೆ ಇಂದು ಈ ಮಕ್ಕಳ ಪ್ರತಿಭೆಯನ್ನು ನೋಡಿ ತುಂಬಾ ಆನಂದವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯ ಅತಿಥಿ ಪಾಂಡುರಂಗ ಶೆಟ್ಟಿ
ಅವರು ಮಕ್ಕಳಿಗೆ ಶುಭ ಹಾರೈಸಿದರು. ಸುರೇಂದ್ರಕುಮಾರ್ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಚಿಣ್ಣರಬಿಂಬ ಬೆಳೆದು ಬಂದ
ಹಾದಿಯ ಬಗ್ಗೆ ವಿವರಿಸಿದರು. ವೇದಿಕೆಯಲ್ಲಿ ಚಿಣ್ಣರಬಿಂಬದ ಸಂಸ್ಥಾಪಕರಾದ ವಿಜಯಕುಮಾರ್ ಶೆಟ್ಟಿ,ಸುರೇಂದ್ರ ಕುಮಾರ್ ಹೆಗ್ಡೆ, ಸ್ಥಾಪಕಾಧ್ಯಕ್ಷೆ ಪೂಜಾ ಪ್ರಕಾಶ್ ಭಂಡಾರಿ, ಕಾರ್ಯಾಧ್ಯಕ್ಷೆ
ನೈನಾ.ಪಿ.ಭಂಡಾರಿ ಚಿಣ್ಣರಬಿಂಬದ ಸಮಿತಿ ಸದಸ್ಯರಾದ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ, ರಮೇಶ್ ರೈ,ಜಗದೀಶ್ ರಾವ್, ರಮೇಶ್ ರೈ, ನಿತ್ಯಾನಂದ ಬೆಳವಾಯಿ, ಸುಜಾತ ಶೆಟ್ಟಿ, ಚಿಣ್ಣರಾದ ಪ್ರಣಮ್ ಶೆಟ್ಟಿ,
ಅಂಕಿತಾ ರೈ, ಪ್ರಜ್ಞಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಿಣ್ಣರಾದ ಪವಿತ್ರಾ ದೇವಾಡಿಗ,ದೀಕ್ಷಿತಾ ಕೊಠಾರಿ, ಹಸ್ತಾ ಶೆಟ್ಟಿ, ವಿಕ್ಕಿ ಶೆಟ್ಟಿ, ಪ್ರಜ್ವಲ್ ಶೆಟ್ಟಿ ಶ್ರೀರಕ್ಷಾ ಶೆಟ್ಟಿ, ಸುಪ್ರಿಯಾ ಉಡುಪ
ಮೊದಲಾದವರು ಅತಿಥಿಗಳನ್ನು ಪರಿಚಯಿಸಿದರು. ಪ್ರಕಾಶ್ ಭಂಡಾರಿ, ಪೂಜಾ ಭಂಡಾರಿ, ನೈನಾಭಂಡಾರಿ ಹಾಗೂ ಚಿಣ್ಣರು ಅತಿಥಿಗಳನ್ನು ಗೌರವಿಸಿದರು.
ಡಾ. ಪೂರ್ಣಿಮಾ.ಎಸ್.ಶೆಟ್ಟಿ ಹಾಗೂ ಚಿಣ್ಣರಬಿಂಬದ ಪುಟಾಣಿಗಳಾದ ದರ್ಶನ್ ಶೆಟ್ಟಿ, ಕೀರ್ತಿ ಶೆಟ್ಟಿಕಾರ್ಯಕ್ರಮ ನಿರೂಪಿಸಿ ವಂದಿಸಿದರು.














