ಮಂಗಳೂರು: ಯು ಟು ಸಿನಿಮಾ ಟಾಕೀಸ್ ಲಾಂಛನದಲ್ಲಿ ಶೋಭರಾಜ್ ಪಾವೂರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ‘ಏಸ’ ಹೊಸ ತುಳು ಚಿತ್ರಕ್ಕೆ ಕಾಂತಾವರ ಕಾಂತೇಶ್ವರ ದೇವರ ಸನ್ನಿಧಿಯಲ್ಲಿ ಗುರುವಾರ ಚಿತ್ರೀಕರಣ ಆರಂಭಗೊಂಡಿತು. ಕಾರಿಂಜೆ ಮಠದ ಮುಕ್ತಾನಂದ ಸ್ವಾಮೀಜಿ ಅವರು ಮುಹೂರ್ತ ನೆರವೇರಿಸಿ ಆಶೀರ್ವಚನ ನೀಡಿದರು.
ಉದ್ಯಮಿ ಭಾಸ್ಕರ ಎಸ್.ಕೋಟ್ಯಾನ್, ಕಾಂತೇಶ್ವರ ದೇವಳದ ಆಡಳಿತ ಮೊಕ್ತೇಸರ ಜೀವಂಧರ್ ಬಲ್ಲಾಳ್, ಮಿಯಾರು ಜಿ.ಪಂ.ಸದಸ್ಯ ಉದಯ ಕೋಟ್ಯಾನ್, ಜಯಕೀರ್ತಿ ಕಡಂಬಾರು, ಯಶ್‍ರಾಜ್, ಶಿಕ್ಷಕ ವಿಠಲ ಬೇಲಾಡಿ, ಅಶ್ವಿತ್ ಕೊಠಾರಿ, ಸುಹಾನ್‍ಪ್ರಸಾದ್, ಸುಧಾಕರ ಶೆಟ್ಟಿ ಕಾಂತಾವರ, ಅಚ್ಚಣ್ಣ ಶೆಟ್ಟಿ, ಮಹಾವೀರ ಜೈನ್ ಮತ್ತಿತರ ಗಣ್ಯರು ಸಮಾರಂಭದಲ್ಲಿ ಹಾಜರಿದ್ದು ಶುಭ ಕೋರಿದರು. ಬಳಿಕ ಕಾಂತೇಶ್ವರನ ಸನ್ನಿಧಿಯಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ಭಾಸ್ಕರ ಕೋಟ್ಯಾನ್ ಕ್ಲಾಪ್ ಮಾಡಿ ಚಾಲನೆ ನೀಡಿದರು.

26-1
ಉದಯ ಶೆಟ್ಟಿ ಕಾಂತಾವರ ಹಾಗೂ ಉದಯ ಸಾಲಿಯಾನ್ ನಿರ್ಮಾಣದ ಏಸ ಚಿತ್ರವನ್ನು ಕನ್ನಡದ ಹೆಸರಾಂತ ನಿರ್ದೇಶಕ ಎಂ.ಎನ್.ಜಯಂತ್ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಛಾಯಾಗ್ರಹಣದ ಜವಾಬ್ದಾರಿಯನ್ನು ತಮಿಳು ಚಿತ್ರರಂಗದ ಖ್ಯಾತ ಕೆಮರಾಮ್ಯಾನ್ ಮೋಹನ್ ಲೋಗನಾಥನ್ ವಹಿಸಿಕೊಂಡಿದ್ದು, ಗುರು ಸಂಗೀತ ನಿರ್ದೇಶನವಿರಲಿದೆ. ಚಿತ್ರಕ್ಕೆ ರಾಹುಲ್ ಅಮೀನ್ ಹಾಗೂ ರಾಧಿಕಾ ರಾವ್ ನಾಯಕ-ನಾಯಕಿಯಾಗಿದ್ದಾರೆ. ಇನ್ನುಳಿದಂತೆ ತುಳು ರಂಗಭೂಮಿ ಮತ್ತು ಚಿತ್ರರಂಗದ ಪ್ರಖ್ಯಾತ ಕಲಾವಿದರಾದ ನವೀನ್ ಡಿ.ಪಡೀಲ್, ಭೋಜರಾಜ ವಾಮಂಜೂರು, ಅರವಿಂದ್ ಬೋಳಾರ್, ಸುನೀಲ್ ನೆಲ್ಲಿಗುಡ್ಡೆ ಮತ್ತಿತರ ಕಲಾವಿದರ ತಾರಾಗಣವಿದೆ.
ಚಿತ್ರದ ಚಿತ್ರೀಕರಣ ಬಾರಾಡಿ, ಕಾಂತಾವರ, ಮೂಡಬಿದ್ರೆ ಹಾಗೂ ಮಂಗಳೂರಿನ ಸುತ್ತಮುತ್ತ ನಡೆಯಲಿದೆ. ಚಿತ್ರದ ಬಗ್ಗೆ ಮಾತಾಡಿದ ಶೋಭರಾಜ್ ಅವರು, ‘ಚಿತ್ರದಲ್ಲಿ ವಿಭಿನ್ನ ಪ್ರೇಮಕಥೆ, ಹಾಸ್ಯ ಹಾಗೂ ಜನಜೀವನಲ್ಲಿ ನಿತ್ಯ ನಡೆಯುವ ಘಟನಾವಳಿಗಳೇ ಪ್ರಧಾನ ವಸ್ತುವಾಗಿರಲಿದೆ. ಎಲ್ಲರೂ ಒಂದಲ್ಲ ಒಂದು ಕಾರಣಕ್ಕೆ ವೇಷ ಹಾಕಿಕೊಂಡೇ ಬದುಕುತ್ತಾರೆ. ಈ ವೇಷವನ್ನು ಕಳಚುವ ಪ್ರಯತ್ನವನ್ನು ಚಿತ್ರದಲ್ಲಿ ನಡೆಸಲಾಗುತ್ತದೆ’ ಎಂದರು.

By suddi9

Leave a Reply

Your email address will not be published. Required fields are marked *