ಮಂಗಳೂರು : ಪುತ್ತೂರು ಯುವ ಬಂಟರ ಸಂಘ ಅ. 11ರಂದು ಆಯೋಜಿಸಿದ ಕರಾವಳಿ ಬಂಟರ ಕಲಾ ವೈಭವ-2015ರಲ್ಲಿ ಗುರುಪುರ ಬಂಟರ ಮಾತೃ ಸಂಘ ದ್ವಿತೀಯ ಪ್ರಶಸ್ತಿ ಗಳಿಸಿದೆ.
ಸಂಘದ ಪದಾಧಿಕಾರಿಗಳಾದ ಸುದರ್ಶನ ಪೆರ್ಮಂಕಿ, ಪುರುಷೋತ್ತಮ ಮಲ್ಲಿ, ಸತ್ಯಾನಂದ ಶೆಟ್ಟಿ ಹಾಗೂ ಸ್ಥಳೀಯ ಕೆಲವು ಹಿರಿಯ ಬಂಟರು ಹಾಗೂ ಮಹಿಳಾ ಪದಾಧಿಕಾರಿಗಳ ಸಹಕಾರದೊಂದಿಗೆ ಸಂಘದ ಯುವ ಕಲಾ ತಂಡವು ಇದುವರೆಗೆ ಕೆಲವು ಯಶಸ್ವಿನ ಮಜಲು ದಾಟಿದೆ. ಇವರ ಕಲಾ ತಂಡಕ್ಕೆ ಕಲಾವಿದ, ಪತ್ರಕರ್ತ ಪರಮಾನಂದ ಸಾಲ್ಯಾನ್ ನಿರ್ದೇಶಕರಾಗಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ನಿರ್ದೇಶನ, ದ ಕ ಜಿಲ್ಲಾ ಯುವ ಬಂಟರ ಸಂಘ, ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ, ಪುತ್ತೂರು ತಾಲೂಕು ಬಂಟರ ಸಂಘ, ಮಹಿಳಾ ಮತ್ತು ವಿದ್ಯಾರ್ಥಿ ಸಂಘ ಪುತ್ತೂರು ಇವುಗಳ ಸಹಯೋಗದಲ್ಲಿ ಪುತ್ತೂರು ಕೊಂಬೆಟ್ಟು ಬಂಟರ ಭವನದಲ್ಲಿ ಕಲಾವೈಭವದಂಗವಾಗಿ `ರಂಗ್ದೈಸಿರಿ’ ಸ್ಪರ್ಧೆ ನಡೆದಿದ್ದು, ಇದರಲ್ಲಿ ಜಿಲ್ಲೆಯ ಕೆಲವು ಕಡೆಯ ಬಂಟರ ಮಾತೃ ಸಂಘಗಳ ಪಾಲ್ಗೊಂಡಿದ್ದವು.
ಸ್ಪರ್ಧೆಯಲ್ಲಿ ಗುರುಪುರಕ್ಕೆ ದ್ವಿತೀಯ ಪ್ರಶಸ್ತಿ ಮತ್ತು ನಗದು-ಟ್ರೋಫಿ ಲಭಿಸಿದ್ದರೆ, ಸುರತ್ಕಲ್ ಸಂಘ ಪ್ರಥಮ ಹಾಗೂ ಜಪ್ಪಿನಮೊಗರು ಬಂಟರ ಸಂಘ ತೃತೀಯ ಪ್ರಶಸ್ತಿ ಗಳಿಸಿದೆ.
ಸ್ಪರ್ಧೆಯಲ್ಲಿ ಪುತ್ತೂರು ಬಂಟರ ಮಾತೃ ಸಂಘ ಶಿಸ್ತುಬದ್ಧ ತಂಡವಾಗಿ ಆಯ್ಕೆಯಾಯಿತು. ಗುರುಪುರ ತಂಡದ ಅಶ್ರಿತಾ ಶೆಟ್ಟಿ (ಅಬ್ಬಗ ಪಾತ್ರ) ಉತ್ತಮ ನಟಿ ಹಾಗೂ ಬಂಟ್ವಾಳ ತಂಡದ ರಾಜೇಶ್ ಶೆಟ್ಟಿ ಉತ್ತಮ ನಟ ಪ್ರಶಸ್ತಿ ಗಳಿಸಿದರು.

