ನವದೆಹಲಿ(ಏ.25): ಒಂದೇ ಕುಟುಂಬದ ಆರು ಮಂದಿ ಬೆಂಕಿಗೆ ಆಹುತಿಯಾಗಿದ ದಾರುಣ ಘಟನೆ ವರದಿಯಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ಗಂಡ ಮತ್ತು ನಾಲ್ವರು ಮಕ್ಕಳನ್ನ ಬೆಂಕಿ ಹಚ್ಚಿ ಹತ್ಯೆಗೈದಿದ್ದಾಳೆ. ತಾನೂ ಬೆಂಕಿಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಸತ್ತವರಲ್ಲಿ ನಾಲ್ಕು ವರ್ಷದ ಬಾಲಕನೂ ಸೇರಿದ್ದಾನೆ.

ಸತ್ತವರನ್ನ ಫಿರೋಜ್(35), ಯಾಸ್ಮಿನ್(32), ಅಫ್ರೋಜ್(12), ಅಫ್ರೀನ್(11), ಆಮಿರ್(4) ಮತ್ತು ಆಸಿಫ್(7) ಎಂದು ಗುರುತಿಸಲಾಗಿದೆ. ಫಿರೋಜ್ ಅವರು ಎಂಬ್ರಾಯ್ಡರಿ ಫ್ಯಾಕ್ಟರಿ ನಡೆಸುತ್ತಿದ್ದರು. ಮಾನಸಿಕ ಖಿನ್ನತೆಗೆ ಗುರಿಯಾಗಿದ್ದ ಯಾಸ್ಮಿನ್ ತನ್ನಿಡೀ ಕುಟುಂಬವನ್ನ ಬಲಿತೆಗೆದುಕೊಂಡಿದ್ದಾಳೆ. ಜಾಮಿಯಾ ನಗರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಜಾಕಿರ್ ನಗರ್’ನ ಮನೆಯಲ್ಲಿ ಈ ಭೀಕರ ಘಟನೆ ನಡೆದಿದೆ.
ಯಾಸ್ಮಿನ್ ತನ್ನ ಕುಟುಂದವರೆಲ್ಲರಿಗೂ ಮತ್ತು ಬರಿಸುವ ಔಷಧ ನೀಡಿ ಪ್ರಜ್ಞೆ ತಪ್ಪಿಸಿದ್ದಾಳೆ. ಮನೆಯ ಬಾಗಿಲು ಮುಚ್ಚಿ ಎಲ್ಲರಿಗೂ ಬೆಂಕಿಹಚ್ಚಿ ತಾನೂ ಬೆಂಕಿ ಹಚ್ಚಿಕೊಂಡಿದ್ದಾಳೆ. ಮನೆಯಲ್ಲಿ ಬೆಂಕಿಯ ಜ್ವಾಲೆ ಹೊತ್ತಿ ಉರಿಯುತ್ತಿರುವುದನ್ನ ಕಂಡ ಅಕ್ಕಪಕ್ಕದ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಾಗಲೇ ಯಾಸ್ಮಿನ್ ಮತ್ತು ಅಫ್ರೀನ್ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದ ವ್ಯಕ್ತಿಗಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಬಳಿಕ ಸಾವನ್ನಪ್ಪಿದ್ದಾರೆ.
ಆಮೀರ್ ಎಂಬುವವರು ತಾನು ಸಾಯುವ ಮುನ್ನ ಪೊಲೀಸರಿಗೆ ನೀಡಿದ ಹೇಳಿಕೆ ಪ್ರಕಾರ, ಯಾಸ್ಮಿನ್ ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ.

