ಕೊಂಕಣ ರೈಲು ಜಾರ್ಜ್ ಫೆರ್ನಾಂಡಿಸ್ರ ದೂರದೃಷ್ಠಿ: ಶಿಮಂತೂರು ಉದಯ ಶೆಟ್ಟಿ
ಮುಂಬಯಿ : ನಮ್ಮದು ಜನಪರ ಚಿಂತನೆ ಆಗಿದ್ದು ರೈಲು ಸಮಸ್ಯೆಗಳ ಬಗ್ಗೆ ನಮ್ಮ ದನಿಯನ್ನು ಸರಕಾರಕ್ಕೆ ತಲುಪಿಸಿ ವ್ಯವಸ್ಥೆಗಳನ್ನು ಜಾರಿತರುವಲ್ಲಿ ಶ್ರಮಿಸುತ್ತಿದ್ದೇವೆ. ಇದು ಜನಸಾಮಾನ್ಯರ ಸೇವಾ ಸಂಸ್ಥೆಯಾಗಿದೆ. ಆದುದರಿಂದ ಸಂಖ್ಯೆಯ ಬಲದ ನಿರ್ಧಾರ ಪರಿಗಣಿಸಲು ಹೋಗದೆ ಹೋರಾಟದ ಮುಖೇನ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಕರ್ನಾಟಕದ ಕರಾವಳಿ ಜನತೆಯ ಬದುಕು-ಸಂಬಂಧವನ್ನು ಕರ್ನಾಟಕ- ಗೋವಾ-ಮಹಾರಾಷ್ಟ್ರ ಮೂಲಕ ಕೊಂಕಣ ರೈಲುಹಳಿಗಳ ಮೂಲಕ ಬೆಸೆಯುವಲ್ಲಿ ಅವಿರತ ಶ್ರಮಿಸಿ ನಮ್ಮೆಲ್ಲರಿಗೂ ಪ್ರೇರಣೆಯಾಗಿರುವ ಕೊಂಕಣ ರೈಲ್ವೇಯ ರೂವಾರಿ, ಅಂದಿನ ರೈಲ್ವೇ ಸಚಿವ ಮಾನ್ಯ ಜಾರ್ಜ್ ಫೆರ್ನಾಂಡಿಸ್ ಅವರ ತ್ಯಾಗದ ಫಲವನ್ನು ನಾವುಗಳು ಅರಿತು ಭವಿಷ್ಯತ್ತಿನ ಪೀಳಿಗೆಗೂ ಅದನ್ನು ತಲುಪಿಸುವಲ್ಲಿ ಶ್ರಮಿಸಬೆಕಾಗಿದೆ.
ಜಾರ್ಜ್ ಫೆರ್ನಾಂಡಿಸ್ ಅವರ ಕನಸನ್ನು ನಿಜಗೊಳಿಸುವ ಉದ್ದೇಶವೂ ನಮ್ಮ ರೈಲ್ವೇ ಯಾತ್ರಿ ಸಂಘದ್ದಾಗಿದೆ ಎಂದು ಸಂಘದ ಅಧ್ಯಕ್ಷ ಶಿಮಂತೂರು ಉದಯ ಶೆಟ್ಟಿ ತಿಳಿಸಿದರು. ರೈಲ್ವೇ ಯಾತ್ರಿ ಸಂಘ ಬೊರಿವಲಿ ಮುಂಬಯಿ (ಪಶ್ಚಿಮ ವಲಯ) ಸಂಸ್ಥೆಯು ಇಂದಿಲ್ಲಿ ಶನಿವಾರ ಪೂರ್ವಾಹ್ನ ಬೊರಿವಲಿ ಪಶ್ಚಿಮದ ಜೈರಾಜ್ನಗರದ ಹೊಟೇಲ್ ಲಿಂಕ್ವ್ಯೂನಲ್ಲಿ ಆಯೋಜಿಸಿದ್ದ ರೈಲ್ವೇ ಯಾತ್ರಿಕರ ಸಭೆಯ ಅಧ್ಯಕ್ಷತೆಯನ್ನುದ್ದೇಶಿಸಿ ಶಿಮಂತೂರು ಮಾತನಾಡಿದರು. ಸಂಘದ ಸ್ಥಾಪಕ ಗೌರವಾಧ್ಯಕ್ಷ ವಿರಾರ್ ಶಂಕರ್ ಬಿ.ಶೆಟ್ಟಿನೇತೃತ್ವದಲ್ಲಿ ಜರುಗಿದಸಭೆಯ ವೇದಿಕೆಯಲ್ಲಿಸಂಘದ ಸಲಹಾಗಾರ ಎರ್ಮಾಳ್ ಹರೀಶ್ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಶೀಲಾ ಶೆಟ್ಟಿ ಆಸೀನರಾಗಿದ್ದು, ಸಭೆಯ ಆಯೋಜಕ ಎರ್ಮಾಳ್ ಹರೀಶ್ ಅವರನ್ನು ಪುಷ್ಫಗುಪ್ಚವನ್ನಿತ್ತು ಗೌರವಿಸಿದರು. ಸಂಘಟನಾಶೀಲ ವ್ಯಕ್ತಿತ್ವಕ್ಕೆ ನಾವು ಪ್ರೋತ್ಸಾಹಿಸುತ್ತಿದ್ದೇವೆ. ಸದ್ಯದ ಕೊಂಕಣ ರೈಲು ಹಳಿಯ ಏಕಮುಖ ಯಾನವನ್ನು ದ್ವಿಪಥ ಸಂಚಾರವಾಗಿಸುವಲ್ಲಿ ರೈಲ್ವೇ ಖಾತೆ ಸಚಿವ ಸುರೇಶ್ ಶೆಟ್ಟಿ ಗಮನ ಹರಿಸಬೇಕು. ರೈಲ್ವೇ ಇಲಾಖೆ ಈ ವ್ಯವಸ್ಥೆಯನ್ನು ಶೀಘ್ರವೇ ಯೋಜನೆಯಾಗಿಸಿ ಪ್ರಯಾಣಿಕರ ಅನುಕೂಲಕ್ಕೆ ಸ್ಪಂದಿಸಬೇಕು. ಸಂಸದ ಗೋಪಾಲ ಸಿ.ಶೆಟ್ಟಿ ಅವರ ಸಹಯೋಗ ನಮ್ಮ ಹೋರಾಟಕ್ಕೆ ಆನೆಬಲವಾಗಿದ್ದು ಅವರ ಮಾರ್ಗದರ್ಶನದಂತೆ ಸಂಘವು ಕಾರ್ಯಚರಿಸುತ್ತಿದೆ. ಇದನ್ನು ಜನಜಾಗೃತಿಯ ಮೂಲಕ ಪೂರೈಸಲು ಸಂಘವು ಪ್ರಯತ್ನಿಸುತ್ತಿದೆ ಎಂದೂ ಶಿಮಂತೂರು ಉದಯ ಶೆಟ್ಟಿ ತಿಳಿಸಿದರು. ವಿರಾರ್ ಶಂಕರ್ ಮಾತನಾಡಿ ನಮ್ಮ ಪೀಳಿಗೆಯ ಇನ್ನೊಂದು ಜನಾಂಗಪರ ಪಲ್ಲಟಕ್ಕೆ ಮೆರಗು ನೀಡಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾದ ಜಾರ್ಜ್ ಫೆರ್ನಾಂಡಿಸ್ ಅವರ ದೂರದೃಷ್ಠಿಯನ್ನು ನನಸಾಗಿಸಲು ಬದ್ದರಾಗಿ ರೈಲುಪ್ರಯಾಣಿಕರೆಲ್ಲರೂ ಸಾಥ್ ನೀಡಿದಲ್ಲಿ ನಮ್ಮ ಉದ್ದೇಶವೂ ಪರಿಪೂರ್ಣಗೊಳ್ಳುವುದು. ಸಂಘವು ನಗರದ ವಿವಿದೆಡೆಗಳಲ್ಲಿ ಸಭೆ ನಡೆಸಿ ರೈಲು ಪ್ರಯಾಣಿಕರ ಸಮಸ್ಯೆಗಳನ್ನು ತಿಳಿಯುವ ಪ್ರಯತ್ನ ಮಾಡುತ್ತಿದೆ. ಸಭೆಗಳಿಂದ ಪ್ರೇರಣಾಶಕ್ತಿ ಲಭಿಸುತ್ತಿದೆ. ಸಮಸ್ಯೆ ಪರಿಹಾರಕ್ಕೆ ಶಕ್ತಿ ತುಂಬುವರೇ ಸಭಿಕರು. ಅವರ ಪ್ರತೀಯೊಂದು ಅಭಿಪ್ರಾಯಗಳೂ ನಮಗೆ ಪ್ರೇರಪಣೆಯಾಗಿವೆ. ಸಾರ್ವಜನಿಕ ಬೆಂಬಲದಿಂದ ಸಮಸ್ಯೆಗಳು ಪರಿಹಾರಗೊಳ್ಳಲು ಸಾಧ್ಯ. ಜನಬೆಂಬಲದ ಹೋರಾಟಕ್ಕೆ ಶೀಘ್ರ ಫಲಿತಾಂಶ ದೊರೆಯುತ್ತಿದ್ದು, ಇದಕ್ಕಾಗಿ ಪ್ರತೀಯೋರ್ವ ನಾಗರಿಕರು ನಮ್ಮನ್ನು ಬೆಂಬಲಿಸಿ ಪ್ರೋತ್ಸಾಹಿಸಿದ್ದಲ್ಲಿ ನಮ್ಮ ಹೋರಾಟಕ್ಕೂ ಜಯ ಪ್ರಾಪ್ತಿಯಾಗಲಿದೆ ಎಂದರು. ಸಂಘದ ಕಾರ್ಯಕಾರಿ ಕಾರ್ಯದರ್ಶಿ ಓಲಿವೆರ್ ಡಿ’ಸೋಜಾ ಅವರು ಈ ಪಶ್ಚಿಮ ಮಾರ್ಗವಾಗಿ ಕೊಂಕಣರೈಲು ಯಾಕೆ ಬೇಕು..?, ರೈಲು ಸೇವೆಯ ಸಮಸ್ಯೆ, ಅದಕ್ಕಾಗಿ ಪರಿಹಾರ, ಪರ್ಯಾಯ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಸ್ಥೂಲವಾದ ಮಾಹಿತಿಯನ್ನಿತ್ತರು. ಸಂಘದ ಉಪಾಧ್ಯಕ್ಷ ಪ್ರೇಮನಾಥ ಕೋಟ್ಯಾನ್, ಜೊತೆ ಕಾರ್ಯದರ್ಶಿ ರಜಿತ್ ಸುವರ್ಣ, ಸಲಹೆಗಾರ ಹರೀಶ್ ಎನ್.ಶೆಟ್ಟಿ ಮಲಾಡ್, ವಾಸು ಪುತ್ರನ್, ಅನಿಲ್ಕುಮಾರ್ ಸಾಲಿಯಾನ್, ಜಯರಾಮ ಶೆಟ್ಟಿ ಮತ್ತಿತರರು ಮಾತನಾಡಿ ರೈಲುಯಾನದ ಬಗ್ಗೆ ತಮ್ಮ ಅನುಭವಗಳ ಅಭಿಪ್ರಾಯ ಸೂಚನೆ ಪ್ರಸ್ತಾಪಿಸಿದರು. ರವಿರಾಜ್ ಕಲ್ಯಾಣ್ಪುರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಶೀಲಾ ಶೆಟ್ಟಿ ಅಭಾರ ಮನ್ನಿಸಿದರು.












