ಮುಂಬಯಿ (ಕೃಷ್ಣರಾಜಪೇಟೆ), ಜು.18: ಮುಸ್ಲಿಂ ಬಂಧುಗಳ ಪವಿತ್ರ ಹಬ್ಬವಾದ್ ರಂಜಾನ್ ಅಂಗವಾಗಿ ಇಂದು ಪಟ್ಟಣದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿದ ಮುಸ್ಲಿಂ ಬಂಧುಗಳು ಒಂದು ತಿಂಗಳ ಕಾಲ ಶ್ರದ್ಧಾ ಭಕ್ತಿಯಿಂದ ಉಪವಾಸ ವ್ರತ ನಡೆಸಿ ಆಚರಿಸಿ ಈದ್ ಉಲ್ಫಿತರ್ ವ್ರತಕ್ಕೆ ತೆರೆ ಎಳೆದು ರಂಜಾನ್ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಿದರು. ಈ ಸಂದರ್ಭದಲ್ಲಿ ಶಾಸಕ ನಾರಾಯಣಗೌಡ ರಂಜಾನ್ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಾರೈಸಿದರು.


ಪಟ್ಟಣದ ಶ್ರವಣಬೆಳಗೊಳ ರಸ್ತೆಯಲ್ಲಿರುವ ಜಾಮೀಯಾ ಮಸೀದಿಯ ಬಳಿ ಜಮಾಯಿಸಿದ ಮುಸ್ಲಿಂ ಬಂಧುಗಳು ಪಟ್ಟಣದ ಮುಖ್ಯರಸ್ತೆಯಲ್ಲಿ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಸಮೂಹಿಕ ಪ್ರಾರ್ಥನೆ ಮಾಡಿದರು. ಮುಸ್ಲಿಂ ಧರ್ಮಗುರು ಮಹಮದ್ ಹಬೀಬ್ ಅವರು ಈದ್ಗಾ ಮೈದಾನದಲ್ಲಿ ಧರ್ಮ ಪ್ರವಚನ ಮಾಡಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಶಾಸಕ ನಾರಾಯಣಗೌಡ ಮುಸ್ಲಿಂ ಬಂಧುಗಳನ್ನು ಉದ್ಧೇಶಿಸಿ ಮಾತನಾಡಿ ಕಳೆದ ಒಂದು ತಿಂಗಳಿನಿಂದ ಮುಸ್ಲಿಂ ಬಂಧುಗಳು ದೊಡ್ಡವರು-ಚಿಕ್ಕವರು ಎಂಬ ಬೇಧ-ಭಾವವಿಲ್ಲದೇ ಉಪವಾಸ ವ್ರತವನ್ನು ನಡೆಸಿ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿರುವ ರಂಜಾನ್ ಹಬ್ಬವು ಸುಖ-ಸಂತೋಷವನ್ನು ತರಲಿ, ಎಲ್ಲರಿಗೂ ದಯಾಮಯನಾದ ಅಲ್ಲಾಹ್ನು ಶಾಂತಿ ನೆಮ್ಮದಿಯನ್ನು ನೀಡಿ ಹರಸಲಿ ಎಂದು ಪ್ರಾರ್ಥಿಸಿದರು.
ಕಷ್ಟಪಟ್ಟು ಬೆವರು ಹರಿಸಿ ದುಡಿಯುವ ಮುಸ್ಲಿಂ ಬಂಧುಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯನ್ನಾಗಿ ಕೊಡುಗೆ ನೀಡಬೇಕೆ ಹೊರತು ಮಕ್ಕಳ ಉಜ್ವಲವಾದ ಭವಿಷ್ಯವನ್ನು ಬಾಲ್ಯದಲ್ಲಿಯೇ ಹೊಸುಕಿ ಹಾಕಿ ಬಾಲಕಾರ್ಮಿಕರನ್ನಾಗಿ ಮಾಡಬಾರದು.
ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ವಿದ್ಯೆಯ ಜ್ಞಾನದಿಂದ ಮಾತ್ರ ಸಮಾಜದ ಸಾಮಾಜಿಕ ಅಸಮಾನತೆ ಮತ್ತು ಜಾತಿ ಪದ್ದತಿಯನ್ನು ಅಳಿಸಿಹಾಕಿ ಸಮಾನತೆಯ ಸಮಾಜವನ್ನು ನಿರ್ಮಾಣ ಮಾಡಲು ದುಡಿಯಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಪಟ್ಟಣದಲ್ಲಿ ಅತ್ಯಾಚಾರಕ್ಕೊಳಗಾದ ಮುಸ್ಲಿಂ ಬಾಲಕಿಯ ಕುಟುಂಬಕ್ಕೆ ಶಾಸಕರು 1ಲಕ್ಷರೂ ಸಹಾಯ ಧನದ ಚೆಕ್ ವಿತರಿಸಿದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಪುರಸಭೆ ಅಧ್ಯಕ್ಷ ಕೆ.ಗೌಸ್ಖಾನ್, ಮುಖಂಡರಾದ ಬಸ್ ಕೃಷ್ಣೇಗೌಡ, ಮಲ್ಲೇನಹಳ್ಳಿ ಮೋಹನ್, ಕೆ.ಆರ್.ನೀಲಕಂಠ, ಉಮ್ಮರ್ಬೇಗ್, ಹಾಫೀಜುಲ್ಲಾ ಶರೀಫ್, ನಯಾಜ್ ಅಹಮದ್, ನಜೀರ್ ಅಹಮದ್, ಸೈಯ್ಯದ್ಖಲೀಲ್, ಆಶ್ರಫ್ಪಾಶ, ಸೈಯ್ಯದ್ ಹಬೀಬ್, ರಫೀಕ್ ಅಹಮದ್ ಸೇರಿದಂತೆ ಸಾವಿರಾರು ಮುಸ್ಲಿಂ ಬಂಧುಗಳು ಭಾಗವಹಿಸಿದ್ದರು. ಈದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯ ನಂತರ ಮುಸ್ಲಿಂ ಬಂದುಗಳು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
