ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿ ಪ್ರಬಲ ಸ್ಪರ್ಧೆಯೊಡ್ಡಿದರೂ ಕೂಡ ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರದಲ್ಲಿ ಜೆಡಿಎಸ್ ಮುಖಂಡ ಕುಮಾರಸ್ವಾಮಿ ಜಯಗಳಿಸುತ್ತಾರೆ ಎಂದು ಗುಪ್ತಚರ ವರದಿ ಹೇಳಿದೆ. ಶಿವಮೊಗ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ಮತ್ತು ಬಂಗಾರಪ್ಪ ಪುತ್ರಿ ಗೀತಾ ಶಿವರಾಜ್ ಕುಮಾರ್ ಬಿಜೆಪಿಯ ಪ್ರಬಲ ಅಭ್ಯರ್ಥಿ ಯಡಿಯೂರಪ್ಪ ಅವರನ್ನು ಸೋಲಿಸಲಿದ್ದಾರೆ. ಯಡಿಯೂರಪ್ಪ ಅವರ ನೀರಸ ಚುನಾವಣೆ ಪ್ರಚಾರ ಗೀತಾ ಅವರಿಗೆ ವರವಾಗಿ ಪರಿಣಮಿಸುತ್ತದೆ.
ಯಡಿಯೂರಪ್ಪ ಸಕ್ರಿಯವಾಗಿ ಪ್ರಚಾರ ಮಾಡುತ್ತಿಲ್ಲ. ತಾವು ದೆಹಲಿಗೆ ಹೋದರೆ ಪಕ್ಷದ ಮೇಲಿನ ಹಿಡಿತ ತಪ್ಪಬಹುದು ಎನ್ನುವುದು ಇದಕ್ಕೆ ಕಾರಣವಿರಬಹುದು. ಬಿಜೆಪಿ ಕೇಂದ್ರದಲ್ಲಿ ಸರ್ಕಾರ ಸ್ಥಾಪಿಸಿದರೆ ತಾವು ಎದುರಿಸುತ್ತಿರುವ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗದೇ ಹೋಗಬಹುದು ಎಂಬ ಭಯವೂ ಅವರನ್ನು ಆವರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

