ಕಾರ್ಕಳ:ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಯುವತಿಯೋರ್ವಳು ಸಾವಿಗೀಡಾದ ಘಟನೆ ಸೋಮವಾರ ಸಂಭವಿಸಿದೆ.
ಶಿರ್ಲಾಲು ಗ್ರಾಮದ ಕಡತ್ತ ಬೈಲು ನಿವಾಸಿ ವಿಜಯ ಶೆಟ್ಟಿ ಅವರ ಪುತ್ರಿ ನಿಶ್ಮಿತಾ ಶೆಟ್ಟಿ (22) ಸಾವಿಗೀಡಾದವರಾಗಿದ್ದಾರೆ. ಘಟನೆಯಿಂದ ಆಕೆಯ ತಾಯಿ ಲೀಲಾ ಶೆಡ್ತಿ (52)ಯ ಎರಡು ಕಾಲುಗಳಿಗೂ ಸಿಡಿಲು ಬಡಿದು ಸ್ವಲ್ಪ ಹೊತ್ತು ಕಾಲಿನ ಬಲ ಕಳೆದುಕೊಂಡಿದ್ದರೂ, ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಸುಧಾರಿಸುತ್ತಿದ್ದಾರೆ. ಅವಿವಾಹಿತೆಯಾಗಿದ್ದ ನಿಶ್ಮಿತಾ ಅವರು ಬೀಜ ಫ್ಯಾಕ್ಟರಿ ಕಾರ್ಮಿಕೆಯಾಗಿದ್ದರು. ತಂದೆ ವಿಜಯ ಶೆಟ್ಟಿ ಕೂಲಿ ಕಾರ್ಮಿಕರಾಗಿದ್ದಾರೆ. ಮನೆಯ ವಿದ್ಯುತ್ ಸ್ವಿಚ್ ಬೋರ್ಡ್ಗೆ ಸಿಡಿಲು ಬಡಿದಿತ್ತು.

ಇದೇ ಗ್ರಾಮದ ಬಶೀರ್ ಅವರ ಪುತ್ರಿ ಶಂರೀನ್ ಭಾನು (14) ಅವರಿಗೂ ಸಿಡಿಲು ಬಡಿದು ಕಾಲಿಗೆ ಸ್ವಲ್ಪ ಸುಟ್ಟ ಗಾಯವಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಸುಧಾರಿಸುತ್ತಿದ್ದಾರೆ.
ಕಳೆದ ಕೆಲವು ದಿನಗಳ ಬಳಿಕ ಕಾರ್ಕಳದಲ್ಲಿ ಸೋಮವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಉತ್ತಮ ಮಳೆಯಾಗಿತ್ತು. ಶಿರ್ಲಾಲಿನಲ್ಲಿ ಮಳೆಯೊಂದಿಗೆ ಗಾಳಿಯೂ ರಭಸವಾಗಿ ಬೀಸಿದ್ದರಿಂದ 2 ಮನೆಗಳ ಹಾಗೂ ಕುಕ್ಕುಂದೂರಿನ ದುರ್ಗಾ ಪ್ರೌಢ ಶಾಲೆಯ ಬಳಿಯ ಮನೆಯೊಂದರ ಹೆಂಚು ಹಾರಿ ಹಾನಿಯಾಗಿದೆ. ಸಾಣೂರು, ಕೆರ್ವಾಶೆ, ಬಜಗೋಳಿಯಲ್ಲಿ ಭಾರಿ ಸಿಡಿಲಿನೊಂದಿಗೆ ಉತ್ತಮ ಮಳೆಯಾಗಿದೆ. ನಿಟ್ಟೆ , ಬೆಳ್ಮಣ್, ಮುಂಡ್ಕೂರು, ಬೈಲೂರಿನಲ್ಲಿಯೂ ಸಾಧಾರಣ ಮಳೆಯಾಗಿದೆ.
