ನವದೆಹಲಿ: ದೆಹಲಿ, ಉತ್ತರ ಪ್ರದೇಶ , ಬಿಹಾರ, ಮಧ್ಯಪ್ರದೇಶ, ಅಸ್ಸಾಂ ಸೇರಿದಂತೆ ದೇಶದ ಹಲವೆಡೆ ಸುಮಾರು 20ಸೆಕೆಂಡ್ ಗಳ ಕಾಲ ಭೂಕಂಪನವಾದ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

ರಿಕ್ಷರ್ ಮಾಪಕದಲ್ಲಿ 7.7ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು ನೇಪಾಳದಲ್ಲಿ ಪತ್ತೆಯಾಗಿರುವುದಾಗಿ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
ಪಶ್ಚಿಮಬಂಗಾಳ, ಗುಜರಾತ್, ಆಂಧ್ರಪ್ರದೇಶ, ಮಧ್ಯಪ್ರದೇಶ, ಅಸ್ಸಾಂ, ಜಾರ್ಖಂಡ್, ಜೈಪುರ್, ಲಖ್ನೋದಲ್ಲಿ ಭೂಕಂಪನಕ್ಕೆ ಕಚೇರಿ, ಮನೆಗಳಿಂದ ಸಾರ್ವಜನಿಕರು ಹೊರಗೋಡಿ ಬಂದ ಘಟನೆ ನಡೆಯಿತು.
ಕಠ್ಮಂಡುವಿನಲ್ಲಿ ಭಾರೀ ಅನಾಹುತ
ನೇಪಾಳದ ಕಾಠ್ಮಂಡುವಿನಲ್ಲಿ ಭೂಕಂಪನಕ್ಕೆ ಕಟ್ಟಡಗಳಿಗೆ ಹಾನಿಯಾಗಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಕಾಠ್ಮಂಡು ನಗರದಾದ್ಯಂತ ಜನಜೀವನ ಅಸ್ತವ್ಯಸ್ತವಾಗಿದೆ. ಕಟ್ಟಡದ ಅವಶೇಷಗಳಡಿ ಹಲವರು ಸಿಲುಕಿರುವುದಾಗಿ ಶಂಕಿಸಲಾಗಿದೆ. ನೇಪಾಳದಲ್ಲಿ ಭೂಕಂಪನ 7.5ರಷ್ಟು ತೀವ್ರತೆ ದಾಖಲಾಗಿದೆ.
ಕಾಠ್ಮುಂಡುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದರಿಂದ ಹಲವು ಕಟ್ಟಡಗಳು ನೆಲಸಮವಾಗಿದೆ. ಕಟ್ಟಡದ ಅವಶೇಷಗಳಡಿ ಹಲವಾರು ಜನರು ಸಿಲುಕಿರುವುದಾಗಿ ಶಂಕಿಸಲಾಗಿದೆ. ಸಾವಿರಾರು ಜನರು ರಕ್ಷಣೆಗಾಗಿ ಮೊರೆ ಇಡುತ್ತಿದ್ದಾರೆ ಎಂದು ಮಾಧ್ಯಮಗಳ ವರದಿ ತಿಳಿಸಿದೆ. ಸಾವು, ನೋವು, ನಷ್ಟದ ಬಗ್ಗೆ ಇನ್ನಷ್ಟೇ ಸ್ಪಷ್ಟ ವಿವರ ತಿಳಿದು ಬರಬೇಕಾಗಿದೆ.
ಮಣಿಪಾಲದಲ್ಲೂ ಭೂಕಂಪನ ಅನುಭವ?
ದೆಹಲಿ, ಉತ್ತರ ಭಾರತದಲ್ಲಿ ಭೂಕಂಪನವಾಗಿದ್ದರೆ, ಮತ್ತೊಂದೆಡೆ ಮಣಿಪಾಲದಲ್ಲಿಯೂ ಭೂಕಂಪನವಾದ ಅನುಭವಕ್ಕೆ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದವರು ಹೆದರಿ ಹೊರಗೋಡಿ ಬಂದ ಘಟನೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.
ಭೂಕಂಪನದ ಬಗ್ಗೆ ಕ್ಷಣಕ್ಷಣದ ಮಾಹಿತಿ ಪಡೆಯುತ್ತಿರುವೆ: ಮೋದಿ
ದೇಶದ ಎಲ್ಲೆಲ್ಲಾ ಭೂಕಂಪ ಸಂಭವಿಸಿದೆ ಎಂಬ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಭೂಕಂಪನದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ. ಹಾಗಾಗಿ ದೇಶದ ಜನರ ಮೊರೆಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.
ದೆಹಲಿ, ಕೋಲ್ಕತಾಗಳಲ್ಲಿ ಮೆಟ್ರೋ ಸಂಚಾರ ಬಂದ್:
ತೀವ್ರ ತರದ ಭೂಕಂಪನದ ಹಿನ್ನೆಲೆಯಲ್ಲಿ ದೆಹಲಿ, ಕೋಲ್ಕತಾ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
